ಗೋಣಿಕೊಪ್ಪ ವರದಿ, ನ. 27: ಇಲ್ಲಿನ ಲಯನ್ಸ್ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಮೂಲಕ ರಂಜಿಸಿದರು.

ಕೊಡವ ಮೂಲನಿವಾಸಿಗಳ ಸಾಂಪ್ರದಾಯಿಕ ನೃತ್ಯಗಳನ್ನು 20 ನಿಮಿಷಗಳ ಕಾಲ ಸಮೂಹ ನೃತ್ಯವಾಗಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಉಮ್ಮತ್ತಾಟ್, ಕೋಲಾಟ್, ಬೊಳಕಾಟ್ ಸೇರಿದಂತೆ ವಿವಿಧ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಿ ಸ್ಥಳೀಯ ಕಲೆಗೆ ಪ್ರೋತ್ಸಾಹಿಸಬೇಕು ಎಂಬ ಸಂದೇಶ ಸಾರಲಾಯಿತು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ನಡೆಸಿಕೊಟ್ಟ ನೃತ್ಯ ಪ್ರಾಕಾರವನ್ನು ಪೋಷಕರು ಕಣ್ತುಂಬಿಕೊಂಡರು.

ಸಣ್ಣ ಮಕ್ಕಳ ಹಿಪ್, ಹಾಪ್ ಗುಂಪು ನೃತ್ಯ ರಂಗು ಮೂಡಿಸಿತು. ಉಳಿದಂತೆ ಶಿವತಾಂಡವ, ಸಂಬಾಲ್‍ಪುರಿ, ಪಂಜಾಬಿ ನೃತ್ಯ, ರಾಜಸ್ತಾನಿ ಜಾನಪದ, ಜಯಕರ್ನಾಟಕ ಮಾತೆ, ಪುತ್ತರಿ ಕೋಲಾಟ್, ಏಕಲವ್ಯ ನಾಟಕ, ಫೈರ್ ಫೀಟ್ ಹಾಗೂ ಕಾಲೇಜು ಮಕ್ಕಳ ದೋಲ್ದಾ ನೃತ್ಯ ಮನ ರಂಜಿಸಿತು. ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕøತಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.

ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಮಾತನಾಡಿ, ಜನಸಾಮಾನ್ಯರಿಂದಲೂ ಪ್ರಕೃತಿ ರಕ್ಷಣೆಯಾಗಬೇಕಿದೆ. ಹಿಂದೆ ಕವಿ, ಸಾಹಿತಿಗಳ ಮನದಲ್ಲಿ ಮಾತ್ರ ಮೂಡುತ್ತಿದ್ದ ಪ್ರಕೃತಿಯ ವೈಶಿಷ್ಠತೆ ಇಂದು ಜನಸಾಮಾನ್ಯರೂ ಕೂಡ ಅರಿತುಕೊಳ್ಳುವಂತಾಗಿದೆ. ಆದರೆ, ಇದನ್ನು ಪ್ರಕೃತಿ ರಕ್ಷಣೆಗೆ ಮುಡಿಪಾಗಿಸಬೇಕು. ಪ್ರಕೃತಿಯೊಂದಿಗೆ ಬೆರೆಯುವ ನಾವು ಅದನ್ನು ಉಳಿಸಲು ಮುಂದಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಏರ್ ಮಾರ್ಷಲ್ (ನಿ). ಕೆ.ಸಿ. ಕಾರ್ಯಪ್ಪ ಬಹುಮಾನ ವಿತರಿಸಿದರು. ಈ ಸಂದರ್ಭ ಲಯನ್ಸ್ ಟ್ರಸ್ಟ್ ಚೇರ್‍ಮನ್ ಸಿ.ಎಂ. ಅಪ್ಪಣ್ಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಮರಣ್ ಶುಭಾಶ್, ಲಯನ್ಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಕೆ.ಸಿ. ಪವಿತ್ರ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎ.ಬಿ. ಅಕ್ಕಮ್ಮ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಪಿ.ಡಿ. ತಂಗಮ್ಮ ಉಪಸ್ಥಿತರಿದ್ದರು.

ವಿದ್ಯಾರ್ಥಿ ನಾಯಕರುಗಳಾದ ಎಂ.ಎನ್. ಅಯ್ಯಣ್ಣ, ಎಸ್.ಎ. ನಾಚಪ್ಪ, ಬಿಜಿಲಿ ಮುತ್ತಮ್ಮ ಪಾಲ್ಗೊಂಡಿದ್ದರು.