ಕುಶಾಲನಗರ, ನ. 27: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ರೋಟರಿ ಸಂಸ್ಥೆ ಮೂಲಕ 50 ಮನೆಗಳನ್ನು ನಿರ್ಮಿಸಿಕೊಡಲು ರೋಟರಿ ಚಿಂತನೆ ಹರಿಸಿದೆ ಎಂದು ರೋಟರಿ 3181 ರ ಜಿಲ್ಲಾ ರಾಜ್ಯಪಾಲ ಪಿ.ರೋಹಿನಾಥ್ ತಿಳಿಸಿದರು.

ಕುಶಾಲನಗರ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 113 ವರ್ಷ ನಿರಂತರವಾಗಿ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ರೋಟರಿ ತೊಡಗಿಸಿಕೊಂಡಿದೆ. ರೋಟರಿ 3181 4 ಕಂದಾಯ ಜಿಲ್ಲೆಗಳನ್ನು ಒಳಗೊಂಡಿದ್ದು ದ.ಕ, ಕೊಡಗು, ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು 3372 ಸದಸ್ಯರಿದ್ದಾರೆ. 2018-19 ರ ವಾರ್ಷಿಕ ಸೇವಾ ಯೋಜನೆ ಕಾರ್ಯಕ್ರಮ ಆರಂಭಿಸಿದ್ದು ಈ ಬಾರಿ ಅಂಗನವಾಡಿಗಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪಣತೊಡಲಾಗಿದೆ. ಕ್ಲಬ್ ವ್ಯಾಪ್ತಿಯ ಆಯಾ ರೋಟರಿ ಘಟಕಗಳ ಮೂಲಕ ಅಲ್ಲಿನ ಅಂಗನವಾಡಿ ಕೇಂದ್ರಗಳ ಬಗ್ಗೆ ಸಮೀಕ್ಷೆ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಮೂಲಕ ಅಂಗನವಾಡಿಗಳನ್ನು ದತ್ತು ಪಡೆದು ದಾನಿಗಳು, ಸಾರ್ವಜನಿಕರ ಸಹಕಾರದೊಂದಿಗೆ ರೋಟರಿ ಅಲ್ಲಿಗೆ ಅವಶ್ಯವಿರುವ ಅಗತ್ಯ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು. ಕಳೆದ 4 ತಿಂಗಳ ಅವಧಿಯಲ್ಲಿ ಬೆಳ್ತಂಗಡಿ ವ್ಯಾಪ್ತಿಯ 324 ಅಂಗನವಾಡಿಗಳ ಸಮೀಕ್ಷೆ ನಡೆಸಿ ಅಲ್ಲಿಗೆ ಬೇಕಿರುವ ಸೌಲಭ್ಯಗಳನ್ನು ಒದಗಿಸಲು ಈಗಾಗಲೆ ಕಾರ್ಯಾರಂಭ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ಸಾಲಿನ ವಾರ್ಷಿಕ ಯೋಜನೆ ಮೂಲಕ ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ರೂ. 68 ಲಕ್ಷ ವೆಚ್ಚದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಒದಗಿಸ ಲಾಗಿದೆ. ಕಳೆದ 6 ವರ್ಷಗಳಿಂದ ಉಚಿತ ಕೃತಕ ಕಾಲು ಜೋಡಣಾ ಶಿಬಿರ ಹಮ್ಮಿಕೊಂಡು ಬರಲಾಗುತ್ತಿದ್ದು ಇದುವರೆಗೆ 1 ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳು ಇದರ ಸದುಪಯೋಗ ಪಡೆÉದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸಿದ್ದಾಪುರ ಸರಕಾರಿ ಶಾಲೆಗೆ ತಡೆಗೋಡೆ ನಿರ್ಮಿಸಿಕೊಡಲಾಗಿದ್ದು ಬೋಯಿಕೇರಿ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ಹ್ಯಾಂಡ್ ವಾಶ್ ವ್ಯವಸ್ಥೆ ಒದಗಿಸಲಾಗಿದೆ.

ಈ ವರ್ಷದ ಪ್ರಮುಖ ಯೋಜನೆಯಾಗಿ ಜಿಲ್ಲೆಯ ಸಂತ್ರಸ್ತರಿಗೆ ತಲಾ 5 ಲಕ್ಷ ವೆಚ್ಚದಲ್ಲಿ 50 ಮನೆಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಗಿದ್ದು ಜಿಲ್ಲಾಳಿತದ ನಿರ್ದೇಶನದಂತೆ ಮನೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗು ವದು. ಇದರಲ್ಲಿ ಕುಶಾಲನಗರ ರೋಟರಿ ಮೂಲಕ 10 ಲಕ್ಷ ವೆಚ್ಚದಲ್ಲಿ ಎರಡು ಮನೆಗಳನ್ನು ಒದಗಿಸಲಾಗು ತ್ತಿದೆ ಎಂದರು. ಪ್ರಖ್ಯಾತ ಹೆಪಿಟೇಟ್ ಇಂಡಿಯಾ ಎಂಬ ಎನ್‍ಜಿಓ ಸಂಸ್ಥೆಗೆ ಪ್ರಥಮ ಹಂತದಲ್ಲಿ 25 ಮನೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ವಹಿಸಲಾಗಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಮನೆಗಳ ಹಸ್ತಾಂತರ ಕಾರ್ಯ ನಡೆಯಲಿದೆ ಎಂದರು.

ರೋಟರಿ ಪ್ರಮುಖ ಧ್ಯೇಯ ವಾಗಿದ್ದ ಪೋಲಿಯೋ ನಿರ್ಮೂಲನೆ ಬಹುತೇಕ ಯಶಸ್ವಿಯಾಗಿದ್ದು ಪಾಕಿಸ್ತಾನ, ಅಫ್ಘಾನಿಸ್ತಾನ್, ನೈಜಿರಿಯಾ ಹೊರತುಪಡಿಸಿ ಉಳಿದ ದೇಶಗಳಲ್ಲಿ ಸಂಪೂರ್ಣ ಯಶಸ್ಸು ಲಭಿಸಿದ್ದು 2019ರ ಅಂತ್ಯದ ವೇಳೆಗೆ ಶೇ 100 ಗುರಿ ಸಾಧಿಸಲಾಗುವದು ಎಂದರು.

ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎಂ.ಜೇಕಬ್ ಮಾತನಾಡಿ, ಕುಶಾಲನಗರ ರೋಟರಿ ಮೂಲಕ ಸ್ಥನ ಕ್ಯಾನ್ಸರ್ ಪತ್ತೆಹಚ್ಚುವ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲು ಚಿಂತನೆ ಹರಿಸಲಾಗಿದೆ. ಇದರೊಂದಿಗೆ ಹೆಚ್‍ಐವಿ ಏಡ್ಸ್ ನಿರ್ಮೂಲನೆ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ರಸ್ತೆ ಜಾಥಾ ಹಮ್ಮಿಕೊಳ್ಳಲಾಗುವದು ಎಂದರು. ಈ ಸಂದರ್ಭ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ, ಕುಶಾಲನಗರ ರೋಟರಿ ಕಾರ್ಯದರ್ಶಿ ಪ್ರೇಮ್‍ಚಂದ್ರನ್, ವಲಯ ಪ್ರಮುಖ ಕ್ರಿಜ್ವಲ್ ಕೋಟ್ಸ್ ಇದ್ದರು.