ಮಡಿಕೇರಿ, ನ. 27: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಇತ್ತೀಚೆಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಅಗತ್ಯತೆಯಿರುವ 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರ ನಡೆಯಿತು.

ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ದೀಪ ಹಚ್ಚಲು ಅವಕಾಶ ನೀಡುವದರ ಮೂಲಕ ನೆರವೇರಿಸಿದರು. ಇಂತಹ ಮಕ್ಕಳ ಪೋಷಕರು ಹೆಚ್ಚು ಕಾಳಜಿ ವಹಿಸಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತೆ ಪೋಷಕರಿಗೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಉದ್ದೇಶ ಗಳನ್ನು ವಿವರಿಸಿ, ವಿಶೇಷ ಅಗತ್ಯತೆ ಯುಳ್ಳ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸಲಾಗುತ್ತಿದೆ. ಸರಕಾರದಿಂದ ದೊರೆಯುವ ಸೌಲಭ್ಯ ಗಳಾದ ಸಾರಿಗೆ ಭತ್ಯೆ, ಬೆಂಗಾವಲು ಭತ್ಯೆ, ಸಾಧನ ಸಲಕರಣೆಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಸಿದ್ಧಿಕ್ ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ವೈದ್ಯರು ನೀಡುವ ಸಲಹೆಗಳನ್ನು ಪಾಲಿಸುವಂತೆಯೂ ಮತ್ತು ವಿದ್ಯಾರ್ಥಿಗಳು ಯಾವದೇ ರೀತಿಯ ಹಿಂಜರಿಕೆಯನ್ನು ಇಟ್ಟುಕೊಳ್ಳದೇ ಧೈರ್ಯವಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪ್ರಯತ್ನಿಸಲು ತಿಳಿಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪೆರಿಗ್ರೀನ್ ಮಚ್ಛಾಡೋ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಬೆಟ್ಟನಾಯಕ್, ಡಾ.ಶಿವಕುಮಾರ್, ಡಾ. ಸಿದ್ಧಿಕ್, ಜಿಲ್ಲಾ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳಾದ ಲಿಲ್ಲಿ, ಬಸವರಾಜು, ಸುಶ್ರೂಶಕರ ಅಧೀಕ್ಷಕಿ ಮೀನಾಕುಮಾರಿ ಹಾಜರಿದ್ದರು.

ಶಿಬಿರದಲ್ಲಿ ವಿವಿಧ ನ್ಯೂನತೆಯುಳ್ಳ 154 ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಹಾಜರಿದ್ದರು. ಸ್ಕಂದ ಸ್ವಯಂ ಸೇವಾ ಸಂಸ್ಥೆಯ ಡಾ. ಸುದರ್ಶನ್ ತಂಡವು ವೈದ್ಯಕೀಯ ಮೌಲ್ಯಾಂಕದಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಎಲ್ಲಾ ಬಿ.ಐ.ಇ.ಆರ್.ಟಿ., ಬಿ.ಆರ್.ಪಿ., ಸಿ.ಆರ್.ಪಿ.ಗಳು ಶಿಬಿರದಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎ. ರಾಮಚಂದ್ರ ಸ್ವಾಗತಿಸಿದರು. ಬಿ.ಐ.ಇ.ಆರ್.ಟಿ. ಶಾಂತ ಡಿ.ಕೆ. ವಂದಿಸಿದರು.