ಆಲೂರು-ಸಿದ್ದಾಪುರ, ನ. 27: ಕ್ರೀಡೆಯಿಂದ ಆರೋಗ್ಯ ಹಾಗೂ ಮಾನಸಿಕ ಬುದ್ಧಿ ವೃದ್ಧಿಸುತ್ತದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ. ಹರೀಶ್ ಹೇಳಿದರು.

ಶುಂಠಿ ಶಾಲಾ ಮೈದಾನದಲ್ಲಿ ಶುಂಠಿ ಪೂಜಾ ಯುವತಿ ಮಂಡಳಿ ಮತ್ತು ಬಸವೇಶ್ವರ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸೋಮವಾರಪೇಟೆ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಕ್ರೀಡಾಕೂಟಗಳು ಮರೆಯಾಗುತ್ತಿದ್ದು, ಮಕ್ಕಳಿಂದ ಹಿಡಿದು ಹಿರಿಯರು ಸಹ ಮೊಬೈಲ್ ಹಾಗೂ ಟಿ.ವಿ. ಧಾರಾವಾಹಿಗಳ ಹಿಂದೆ ಬಿದ್ದು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು. ಯುವಕ ಮತ್ತು ಯುವತಿ ಮಂಡಳಿಗಳು ಇತ್ತೀಚೆಗೆ ಗ್ರಾಮೀಣ ಕ್ರೀಡಾಕೂಟಕ್ಕೆ ಹೆಚ್ಚು ಮಹತ್ವ ನೀಡುತ್ತಿರುವದು ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಪೂಜಾ ಯುವತಿ ಮಂಡಳಿಯ ಅಧ್ಯಕ್ಷೆ ಲತಾ ಬಸವರಾಜು ವಹಿಸಿದ್ದರು. ಬಸವೇಶ್ವರ ಯವಕ ಸಂಘದ ಅಧ್ಯಕ್ಷ ಎಂ.ಪಿ. ಲಿಂಗರಾಜು, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ರವಿ, ಶುಂಠಿಯ ಎಸ್.ಎಂ. ಜಿತೇಂದ್ರ, ಎಂ.ಬಿ. ಹೂವಯ್ಯ, ಅಶ್ವತ್, ಶುಂಠಿ ಶಾಲಾ ಮುಖ್ಯ ಶಿಕ್ಷಕ ಮಂಜಪ್ಪ, ಅಂಗನವಾಡಿ ಕಾರ್ಯಕರ್ತೆ ಸುಜಾತಾ ಮುಂತಾದವರಿದ್ದರು.