ಗೋಣಿಕೊಪ್ಪ ವರದಿ, ನ. 27 : ಸಹಕಾರ ಸಂಘಗಳಲ್ಲಿ ದುರುಪಯೋಗ ತಡೆಯಲು ಆಡಳಿತ ಮಂಡಳಿ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ, ಮಾಯಮುಡಿ, ತಿತಿಮತಿ, ಬಾಳೆಲೆ, ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಪರೇಟಿವ್ ಸಹಯೋಗದಲ್ಲಿ ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಹಕಾರ ಸಂಘಗಳಲ್ಲಿ ಸಾಲ ಮರುಪಾವತಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಎಲ್ಲಾ ಸಂಘಗಳು ಲಾಭದತ್ತ ದಾಪುಗಾಲು ಹಾಕಲು ಕಾರಣವಾಗುತ್ತಿದೆ. ಇಡೀ ರಾಜ್ಯಕ್ಕೆ ಜಿಲ್ಲೆ ಮಾದರಿ ಎಂದರು.

ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಮಾತನಾಡಿ, ಸಹಕಾರ ಸಂಘಗಳನ್ನು ಬೆಳೆಸಿದ ಹಿರಿಯರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು. ಕರ್ನಾಟಕ ಇನ್ಟಿಟ್ಯೂಟ್ ಆಫ್ ಕೋಪರೇಟಿವ್ ಪ್ರಾಂಶುಪಾಲ ಪುಟ್ಟಸ್ವಾಮಿ ಸಹಕಾರ ಸಂಘಗಳಲ್ಲಿ ಸದಸ್ಯರಿಗೆ ಇರುವ ಯೋಜನೆ, ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ. ಅಪ್ಪಯ್ಯ, ಬಾಳೆಲೆ ಪ್ಯಾಕ್ಸ್ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ನಲ್ಲೂರು ಪ್ಯಾಕ್ಸ್ ಅಧ್ಯಕ್ಷ ಆಲೆಮಾಡ ಸುದೀರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ನಂದಿನೆರವಂಡ ರವಿ ಬಸಪ್ಪ, ಸಿಇಒ ಯೋಗೇಂದ್ರನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ರವಿಕುಮಾರ್, ಬಾಳೆಲೆ ಎಪಿಎಂಎಸ್ ಅಧ್ಯಕ್ಷ ಅಳಮೇಂಗಡ ಬೋಸ್ ಉಪಸ್ಥಿತರಿದ್ದರು. ಕಾಳಪಂಡ ಬಿದ್ದಪ್ಪ ಸ್ವಾಗತಿಸಿ, ಮಂಜುಳಾ ಪ್ರಾರ್ಥಿಸಿದರು.