ಕುಶಾಲನಗರ, ನ. 28: ನಿಸರ್ಗವನ್ನು ತಮ್ಮ ಬಯಕೆಗಳ ಈಡೇರಿಕೆಯ ಸಂಪನ್ಮೂಲ ಎನ್ನುವಷ್ಟಕ್ಕೆ ಸೀಮಿತವಾಗಿಸಿರುವದು ಪರಿಸರದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲು ಪ್ರಮುಖ ಕಾರಣವಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ನದಿ ನೀರಿನ ಸದ್ಬಳಕೆ ಹಾಗೂ ಮಾಲಿನ್ಯ ತಡೆಗಟ್ಟುವಲ್ಲಿ ಯುವಕರ ಪಾತ್ರ’ ವಿಷಯದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನದಿ ತೀರಗಳು ಸಂಸ್ಕøತಿಯ ಉಗಮಸ್ಥಾನವಾಗಿದ್ದು, ಅವುಗಳನ್ನು ಭೋಗ ವಸ್ತುಗಳಂತೆ ಬಳಸಬಾರದು. ಪರಿಸರ ನಾಶ, ಹವಾಮಾನ ವೈಪರಿತ್ಯದಿಂದ ಧರೆಯಲ್ಲಿ ಏರುಪೇರು ಉಂಟಾಗುವದರೊಂದಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಶುದ್ಧ ಗಾಳಿ ದೊರಕದೆ ಆತಂಕ ಎದುರಾಗುವ ಸಾಧ್ಯತೆಯಿದೆ ಎಂದರು. ಯುವಜನತೆ ಜಲಮೂಲಗಳ ಮಾಲಿನ್ಯ ತಡೆಗಟ್ಟುವಲ್ಲಿ ನೈಜ ಕಾಳಜಿ ವಹಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಹೆಚ್.ಆರ್. ಶಿವಕುಮಾರ್ ಮಾತನಾಡಿ, ಭೂಮಿಯಲ್ಲಿ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಚ್ಚರವಹಿಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲ ಹೆಚ್.ಜೆ. ನಾಗರಾಜ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಪಿ.ಸಿ. ಬೇಲಯ್ಯ, ಕೆಪಿಸಿಎಲ್ ಅಧಿಕಾರಿ ಎಸ್.ಎಸ್. ವಿಜಯಕುಮಾರ್, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಎಸ್.ಎಸ್. ಕೃಷ್ಣ, ಎನ್.ಎಸ್.ಎಸ್. ಸಹ ಶಿಬಿರಾಧಿಕಾರಿ ಸಿ.ಎಸ್. ಹೇಮಲತಾ ಇದ್ದರು. ಶಿಬಿರಾರ್ಥಿಗಳಾದ ಮನು ಸ್ವಾಗತಿಸಿ, ದೀಕ್ಷಿತ್ ವಂದಿಸಿದರು.