ಮಡಿಕೇರಿ, ನ. 28: ಲೋಕ ಕಲ್ಯಾಣಾರ್ಥವಾಗಿ ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಡಿ. 29 ಹಾಗೂ 30 ರಂದು ಗಾಯತ್ರಿ ಪುನಃಶ್ಚರಣೆ ಯಾಗ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ ಅವರು, ಕಳೆದ ಡಿ. 10ರಂದು ಗಣಪತಿ ಹೋಮದೊಂದಿಗೆ ಯಾಗದ ಸಂಕಲ್ಪ ಮಾಡಲಾಗಿದ್ದು, ಇದೀಗ ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಡಿ. 29 ರ ಸಂಜೆಯಿಂದ 30ರ ಮಧ್ಯಾಹ್ನದವರೆಗೆ ಈ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೊಡಗಿನ ಐತಿಹಾಸಿಕ ಕ್ಷೇತ್ರಗಳಲ್ಲೊಂದಾದ ಹೊದ್ದೂರು ಗ್ರಾಮದ ಕಣ್ಣ ಬಲಮುರಿಯ ಶ್ರೀ ಕಣ್ವ ಮುನೀಶ್ವರ ಕ್ಷೇತ್ರದಲ್ಲಿ ಈ ಯಾಗ ನಡೆಯಲಿದ್ದು, ಕೊಡಗಿನ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಅಡಳಿತ ಮಂಡಳಿ, ಅರ್ಚಕರು, ಸಂಘಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿಗಳ ಸಹಕಾರದೊಂದಿಗೆ ಈ ಯಾಗವನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಕಾವೇರಿ ಮಾತೆಯ ಪವಿತ್ರತೆಯನ್ನು ವೃದ್ಧಿಸುವದರೊಂದಿಗೆ ಕೊಡಗಿನಲ್ಲಿ ಇತ್ತೀಚೆಗೆ ನಡೆದಂತಹ ದುರಂತಗಳು ಮತ್ತೆ ಬಾರದಿರುವಂತೆ ಪ್ರಾರ್ಥಿಸಲಾಗುವದು ಎಂದರು.

ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಂಘಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8762846469 ಅಥವಾ 9480204630ನ್ನು ಸಂಪರ್ಕಿಸಬಹುದೆಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮುರಳಿ, ಶ್ರೀಶಕುಮಾರ್ ಹಾಗೂ ಸುರೇಶ್‍ಕುಮಾರ್ ಉಪಸ್ಥಿತರಿದ್ದರು.