ಸೋಮವಾರಪೇಟೆ, ನ. 28: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ನೆಲೆಯಾಗಿರುವ ಪುಷ್ಪಗಿರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೂತನ ಬಸ್ ಸೇವೆ ಒದಗಿಸಲಾಗಿದ್ದು, ಧರ್ಮಸ್ಥಳ-ಸುಬ್ರಹ್ಮಣ್ಯ-ಸೋಮವಾರಪೇಟೆ ಮಾರ್ಗವಾಗಿ ಪ್ರತಿದಿನ ಸಂಜೆ 6 ಗಂಟೆಗೆ ಪುಷ್ಪಗಿರಿಗೆ ಬಸ್ ತೆರಳಲಿದೆ.

ಪುತ್ತೂರು ವಿಭಾಗೀಯ ಕಚೇರಿಯಿಂದ ನೂತನ ಬಸ್ ಸೇವೆ ಆರಂಭಗೊಂಡಿದ್ದು, ಮಡಿಕೇರಿ ಯಿಂದ ಬೆಳಿಗ್ಗೆ 8.45ಕ್ಕೆ ಹೊರಟು ಧರ್ಮಸ್ಥಳಕ್ಕೆ 1 ಗಂಟೆಗೆ ತಲಪಲಿದೆ. ಅಲ್ಲಿಂದ 1.45ಕ್ಕೆ ಹೊರಟು 3 ಗಂಟೆಗೆ ಸುಬ್ರಹ್ಮಣ್ಯಕ್ಕೆ ತೆರಳಿ, ಬಿಸಿಲೆ, ಕೂಡುರಸ್ತೆ, ಶನಿವಾರಸಂತೆ ಮಾರ್ಗವಾಗಿ ಸಂಜೆ 5.45ಕ್ಕೆ ಸೋಮವಾರಪೇಟೆಗೆ ಆಗಮಿಸಲಿದ್ದು, 6 ಗಂಟೆಗೆ ಪುಷ್ಪಗಿರಿಗೆ ತೆರಳಲಿದೆ. ಮಾರನೇ ದಿನ ಬೆಳಿಗ್ಗೆ 7 ಗಂಟೆಗೆ ಪುಷ್ಪಗಿರಿಯಿಂದ ಸೋಮವಾರ ಪೇಟೆ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನೂತನ ಮಾರ್ಗದ ಬಸ್ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಸಾರ್ವಜನಿಕರು ಪೂಜೆ ಸಲ್ಲಿಸಿದರು. ಕುಮಾರಳ್ಳಿ ಗ್ರಾಮದ ಪ್ರದೀಪ್, ಮಾಚಯ್ಯ, ನಾಣಿ, ಸಂಚಾರ ನಿಯಂತ್ರಣಾಧಿಕಾರಿ ಕಾರ್ಯಪ್ಪ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.