ಗೋಣಿಕೊಪ್ಪ ವರದಿ, ನ. 28 : ಡಿ.24 ರಂದು ಮಾಯಮುಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕೊಡವ ಮೇಳ ನಡೆಸುವ ನಿರ್ಧಾರ ವನ್ನು ಮಾಯಮುಡಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಭಾಂಗಣದಲ್ಲಿ ಕೊಡವ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೊಡವ ಮೇಳ ಪೂರ್ವಭಾವಿ ಸಭೆಯಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ನಿರ್ಧರಿಸಲಾಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗ ದಲ್ಲಿ ಒಂದು ದಿನದ ಕಾರ್ಯಕ್ರಮ ನಡೆಸುವಂತೆಯೂ, ಕೊಡವ ಭಾಷಿಗ ಜನಾಂಗದೊಂದಿಗೆ ಹಲವಾರು ಕಾರ್ಯಕ್ರಮ ನಡೆಸುವಂತೆ ನಿರ್ಧರಿಸಲಾಯಿತು.

ಕೊಡವ ಭಾಷಿಗರಿಂದ ಹಲವು ಪ್ರದರ್ಶನ ಕಾರ್ಯಕ್ರಮ ನಡೆಸುವಂತೆ, ಮೆರವಣಿಗೆ, ವಿಚಾರ ಮಂಡನೆ, ಸ್ಥಳೀಯ ವಿಶೇಷ ವ್ಯಕ್ತಿಗಳಿಗೆ ಸನ್ಮಾನ ಈ ರೀತಿ ಹಲವು ವೈವಿದ್ಯಮಯ ಕಾರ್ಯಕ್ರಮ ನಡೆಸುವಂತೆ ನಿರ್ಧರಿಸಲಾಯಿತು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ಮೇಳ ಎಲ್ಲಾರನ್ನೂ ಒಂದುಗೂಡಿಸುವ ಕಾರ್ಯ ಕ್ರಮವಾಗಬೇಕು. ಇದರಂತೆ ಸ್ಥಳೀಯರ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ನಡೆಸಬೇಕು. ಕೊಡವ ಅಕಾಡೆಮಿ ವತಿಯಿಂದ ವಿವಿಧ ಗ್ರಾಮಗಳಲ್ಲಿ ಆಯೋಜಿಸುತ್ತಿರುವ ಕಾರ್ಯ ಕ್ರಮಗಳಿಗೆ ಗ್ರಾಮಸ್ಥರ ಬೆಂಬಲ ಹೆಚ್ಚಾಗಿ ವ್ಯಕ್ತವಾಗುತ್ತಿದೆ. ಇದರಿಂದ ಕಾರ್ಯಕ್ರಮ ಫಲಪ್ರಧವಾಗುತ್ತಿದೆ ಎಂದರು.

ಕೊಡವ ಅಕಾಡೆಮಿ ಸದಸ್ಯ ಆಪಟೀರ ಟಾಟು ಮೊಣ್ಣಪ್ಪ ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಮೇಳ ನಡೆಯುತ್ತಿರುವದು ಹೆಮ್ಮೆಯ ವಿಚಾರವಾಗಿದೆ. ಕೊಡವ ಭಾಷಿಗರ ಕಲೆಗಳನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸುವದರಿಮದ ಕಲೆಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ ಎಂದರು.

ಕಾವೇರಿ ಅಸೋಸಿಯೇಷನ್ ಉಪಾಧ್ಯಕ್ಷ ಕಾಳಪಂಡ ಬಿದ್ದಪ್ಪ, ಪ್ರಮುಖರುಗಳಾದ ಮಲ್ಲಂಡ ಮಹೇಶ್, ಮಾಚಿಮಾಡ ದೇವಾನಂದ, ಬಲ್ಯಂಡ ಪ್ರತಾಪ್, ಪುಚ್ಚಿಮಾಡ ರಾಯ್, ಆಪಟೀರ ನಾಚಯ್ಯ, ಅಪಟ್ಟೀರ ಅರುಣ್ ಸಲಹೆ ನೀಡಿದರು. ಈ ಸಂದರ್ಭ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲ್ಯಂಡ ಭವಾನಿ ಮೋಹನ್, ಜಿ. ಪಂ. ಸದಸ್ಯ ಬಾನಂಡ ಪ್ರಥ್ವು, ಕೊಡವ ಅಕಾಡೆಮಿ ಸದಸ್ಯರುಗಳಾದ ಚಂಗುಲಂಡ ಸೂರಜ್, ಸುಳ್ಳಿಮಾಡ ಭವಾನಿ ಕಾವೇರಪ್ಪ ಉಪಸ್ಥಿತರಿದ್ದರು.