ಸೋಮವಾರಪೇಟೆ, ನ. 28: ಅಸಾಮಾನ್ಯ ನೆನಪಿನ ಶಕ್ತಿಯ ಮೂಲಕ ಕೇವಲ ನಾಲ್ಕು ವರ್ಷದ ಪೋರನೋರ್ವ ಅಂತಾರ್ರಾಷ್ಟ್ರೀಯ ವಂಡರ್ ಬುಕ್ ಆಫ್ ರೆಕಾರ್ಡ್ ಹಾಗೂ ಭಾರತ್ ವಲ್ರ್ಡ್ ರೆಕಾರ್ಡ್ ಬುಕ್‍ನಲ್ಲಿ ತನ್ನ ಹೆಸರು ದಾಖಲಿಸಿಕೊಳ್ಳುವ ಮೂಲಕ ಸಾಧನೆ ಮೆರೆದಿದ್ದಾನೆ. ತುಂಟಾಟದ ವಯಸ್ಸಿನಲ್ಲಿ ಎಲ್ಲರೂ ಬೆರಗಾಗುವಂತಹ ನೆನಪಿನ ಶಕ್ತಿಯನ್ನು ಸಂಪಾದಿಸಿಕೊಂಡಿರುವ ನಾಲ್ಕರ ಪೋರನನ್ನು ಮುಂದಿನ ದಿನಗಳಲ್ಲಿ ವಿಜ್ಞಾನಿಯನ್ನಾಗಿ ತಯಾರಿಸುವ ಇಂಗಿತವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ಪಟ್ಟಣದ, ಮಡಿಕೇರಿ ರಸ್ತೆಯಲ್ಲಿರುವ ಸಂತೋಷ್ ಟೆಕ್ಸ್‍ಟೈಲ್ಸ್ ಮಾಲೀಕ ಹಾಗು ಕಾಫಿ ಬೆಳೆಗಾರರಾದ ಅಶ್ವಿನ್ ಹಾಗು ಆಶಾ ದಂಪತಿಗಳ ಪುತ್ರ ಅನ್ಷ್ (4 ವರ್ಷ) ಇಂತಹ ಅಸಾಧಾರಣ ಸಾಧನೆ ತೋರಿದವನಾಗಿದ್ದು, ಶಿಶು ವಿಹಾರ ಸೇರಿರುವ ಈ ಪೋರ ಅದಾಗಲೇ ಅಂತಾರ್ರಾಷ್ಟ್ರೀಯ ವಂಡರ್ ಬುಕ್ ಆಫ್ ರೆಕಾರ್ಡ್ ಹಾಗೂ ಭಾರತ್ ವಲ್ರ್ಡ್ ರೆಕಾರ್ಡ್ ಬುಕ್‍ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.

2.2 ವರ್ಷದಲ್ಲೇ ಮಗನ ನೆನಪಿನ ಶಕ್ತಿಯನ್ನು ಅರಿತ ತಾಯಿ ಆಶಾ ಹಾಗೂ ತಂದೆ ಅಶ್ವಿನ್, ಆತನ ಪ್ರತಿಭೆಗೆ ಮತ್ತಷ್ಟು ಸಾಮಥ್ರ್ಯ ತುಂಬುವ ಕಾರ್ಯ ಮಾಡಿದರು. ಆರಂಭದಲ್ಲಿ ತಮ್ಮ ಕಾಫಿ ತೋಟಗಳಿರುವ ಗ್ರಾಮಗಳ ಹೆಸರನ್ನು ಹೇಳುತ್ತಿರುವ ಮಗನನ್ನು ಗಮನಿಸಿದ ಇವರು ನಂತರ ವಿವಿಧ ರಾಷ್ಟ್ರಗಳು, ಅವುಗಳ ರಾಜಧಾನಿಗಳ ಹೆಸರನ್ನು ಹೇಳಿಕೊಟ್ಟು ಪುನಃ ಕೇಳಿದಾಗ ತಪ್ಪಿಲ್ಲದೆ ಹೇಳುವದನ್ನು ಕಂಡು ಮೂಕವಿಸ್ಮಿತರಾದರು.

ನಿರಂತರ ಅಭ್ಯಾಸದ ಮೂಲಕ ಮಗನಲ್ಲಿರುವ ಅಸಾಧಾರಣ ಶಕ್ತಿಯನ್ನು ಮತ್ತಷ್ಟು ಉದ್ದೀಪನಗೊಳಿಸಲು ಮುಂದಾದ ಪೋಷಕರ ಶ್ರಮ ವ್ಯರ್ಥವಾಗದೇ, ಇದೀಗ 120 ರಾಷ್ಟ್ರಗಳ ಹೆಸರು ಮತ್ತು ಅವುಗಳ ರಾಜಧಾನಿಯ ಹೆಸರುಗಳನ್ನು ಪಟ ಪಟನೆ ಹೇಳುವ ಮೂಲಕ ದಾಖಲೆ ಬರೆಯಲು ಕಾರಣಕರ್ತರಾಗಿದ್ದಾರೆ.

ಈ ವಯಸ್ಸಿನಲ್ಲಿಯೇ ಪದ್ಯಗಳು, ಕಥೆಗಳನ್ನು ಕೇಳುವದರಲ್ಲಿ ಅತ್ಯಂತ ಆಸಕ್ತಿ ತೋರುತ್ತಿದ್ದು, ಕ್ರೀಡೆಯಲ್ಲಿಯೂ ಅಭಿರುಚಿ ಹೊಂದಿದ್ದಾನೆ. ಮಗನ ಈ ಸಾಧನೆ ಮತ್ತು ಆಸಕ್ತಿಯಿಂದ ಉತ್ತೇಜಿತರಾಗಿ ರುವ ಪೋಷಕರು, ತಮ್ಮ ಮಗ ಒಬ್ಬ ಸುಶಿಕ್ಷಿತನಾಗು ವದರೊಂದಿಗೆ ವಿಜ್ಞಾನಿಯಾಗಿ ದೇಶಕ್ಕಾಗಿ ದುಡಿಯಬೇಕು. ಹಣ, ಆಸ್ತಿಯೇ ಮುಖ್ಯವಲ್ಲ; ದೀನ, ದುರ್ಬಲರಿಗೆ ಸಹಾಯ ಮಾಡುವಂತಾಗ ಬೇಕೆಂಬ ಅಭಿಲಾಷೆ ಹೊಂದಿದ್ದಾರೆ.

ಇದೀಗ 4ನೇ ವರ್ಷಕ್ಕೆ ಕಾಲಿಟ್ಟಿರುವ ಅನ್ಷ್, ದೇಶದ 28 ರಾಜ್ಯಗಳ ರಾಜಧಾನಿ ಹೆಸರು, ಹಲವು ಶ್ಲೋಕಗಳನ್ನು ಹೇಳುವದರೊಂದಿಗೆ ಹತ್ತಾರು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಈತನ ಪ್ರತಿಭೆಯನ್ನು ಗಮನಿಸಿದ ವಂಡರ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಸಂದರ್ಶನ ನಡೆಸಿ ‘ಅಸಾಧಾರಣ ನೆನಪಿನ ಶಕ್ತಿಯುಳ್ಳ ಮಗು’ ಎಂದು ದಾಖಲಿಸಿಕೊಂಡು ಜುಲೈ 2018ರಲ್ಲಿ ಪ್ರಮಾಣ ಪತ್ರ ನೀಡಿದ್ದಾರೆ. ಅಲ್ಲದೆ ಅಕ್ಟೋಬರ್ 2018ರಲ್ಲಿ ಭಾರತ್ ವಲ್ರ್ಡ್ ರೆಕಾರ್ಡ್ ಸಂಸ್ಥೆಯವರು ಸಹ ಈತನ ಸಾಧನೆಯನ್ನು ದಾಖಲಿಸಿಕೊಂಡು ಪ್ರಮಾಣ ಪತ್ರ ನೀಡಿದ್ದಾರೆ.