ಮಡಿಕೇರಿ, ನ. 28: ಪ್ರಕೃತಿ ವಿಕೋಪದಿಂದಾಗಿ ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿ ದಿನದೂಡುತ್ತಿರುವವರಿಗಾಗಿ ಜಿಲ್ಲಾಧಿಕಾರಿಗಳು ಸಭೆ ಏರ್ಪಡಿಸಿ ಪ್ರಸ್ತುತ ಪರಿಹಾರೋಪಾಯಗಳ ಕುರಿತು ಕೈಗೊಂಡಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯುವ ಬಗ್ಗೆ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಇಂದು ನಡೆದ ವಿಶೇಷ ಗ್ರಾಮಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ನಮ್ಮ ಗ್ರಾಮ ನಮ್ಮ ಯೋಜನೆ ವಿಷಯದಡಿ ಇಂದು ಮಕ್ಕಂದೂರು ಗ್ರಾ.ಪಂ. ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮುಂದಿನ ಐದು ವರ್ಷದ ಅವಧಿಗೆ ರಸ್ತೆ, ನೀರು, ಸೇತುವೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ಗ್ರಾಮಸ್ಥರು ಬೇಡಿಕೆಗಳ ಬಗ್ಗೆ ಅಹವಾಲು ಸಲ್ಲಿಸಿದರು.

ಆಕ್ರೋಶ

ಸಭೆಯಲ್ಲಿ ಹಾಜರಿದ್ದ ಗ್ರಾಮದ ಹಿರಿಯರಾದ ಕುಂಬುಗೌಡನ ಉತ್ತಪ್ಪ ಅವರು ಮಾತನಾಡಿ, ತಾವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಾರ್ಯದ ಬಗ್ಗೆ ಮಾಹಿತಿ ಬಯಸಿದ ಸಂದರ್ಭ ಜಿಲ್ಲಾಧಿಕಾರಿಗಳು ಎಲ್ಲವನ್ನೂ ಸರಕಾರಕ್ಕೆ ಕಳುಹಿಸಿದ್ದೇನೆ. ಎಲ್ಲರಿಗೂ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ. ಆದರೆ ನಷ್ಟಕ್ಕೊಳಗಾದ ವರಿಗೆ ಏನೇನೂ ಸಿಗಲಿಲ್ಲ. ಸರಕಾರಕ್ಕೆ ಸರಿಯಾದ ಮಾಹಿತಿ ಹೋಗಿಲ್ಲ. ಅಧಿಕಾರಿಗಳು ಸರ್ವೆ ಕಾರ್ಯ ಮಾಡುವಾಗ ಸ್ಥಳೀಯ ಪಂಚಾಯಿತಿ ಯವರನ್ನು ಕರೆದೊಯ್ಯಬೇಕು. ಇದಾವದೂ ಆಗಿಲ್ಲ. ಜಿಲ್ಲಾಡಳಿತ ದಿಂದಲೂ ಸರಿಯಾದ ಮಾಹಿತಿ ಇಲ್ಲ; ರೈತರು ಈಗ ಭಿಕ್ಷುಕರಂತಾಗಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ ಸರಿಯಾದ ರೀತಿಯಲ್ಲಿ ಪರಿಹಾರ ದೊರಕುವಂತಾಗಬೇಕೆಂದು ಹೇಳಿದರು.

ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್ ಅವರು ಹಾನಿಯಾಗಿರುವ ಬಗ್ಗೆ ಸ್ಥಳೀಯ ಆಡಳಿತವಾದ ಗ್ರಾ.ಪಂ.ನ ಗಣನೆಗೆ ತೆಗೆದುಕೊಳ್ಳದೆ ಅಧಿಕಾರಿಗಳು ವರದಿ ಮಾಡಿದ್ದಾರೆ. ಗ್ರಾ.ಪಂ.ಗೆ ಪ್ರಕೃತಿ ವಿಕೋಪ ನಿಧಿಯಡಿ ಕೇವಲ 50 ಸಾವಿರ ಬಂದಿದೆ. ಕಂದಾಯ ಅಧಿಕಾರಿಗಳು ಭೇಟಿ ಮಾಡುವ ಸಂದರ್ಭ ಆಯಾ ವಾರ್ಡ್‍ನ ಸದಸ್ಯರುಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಜಿಲ್ಲಾಧಿಕಾರಿಗಳು ಕೂಡ ಒಂದು ಸಭೆ ನಡೆಸಿ ಸಂತ್ರಸ್ತರ ಅಹವಾಲು ಆಲಿಸಿಲ್ಲ. ಪಂಚಾಯಿತಿಯಿಂದ ಕಳುಹಿಸಿದ ಕಡತಗಳು ಕಂದಾಯ ಇಲಾಖೆಯಲ್ಲಿ ಮಾಯವಾಗಿವೆ. ಈ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ, ಮನವಿ ಸಲ್ಲಿಸಿದರೂ ಕಿಂಚಿತ್ತೂ ಸ್ಪಂದನ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ತಾ.ಪಂ. ಸದಸ್ಯ ರಾಯ್ ತಮ್ಮಯ್ಯ ಮಾತನಾಡಿ, 6 ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾನಿಯಾಗಿದೆ. ಜಿಲ್ಲಾಧಿಕಾರಿಗಳು ಈ ಗ್ರಾ.ಪಂ. ವ್ಯಾಪ್ತಿಯ ಜನಪ್ರತಿನಿಧಿಗಳು, ಶಾಸಕರು, ಅಭಿವೃದ್ಧಿ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸುವ ಕೆಲಸವನ್ನೂ ಮಾಡಿಲ್ಲ; ಪರಿಹಾರ ಕಾರ್ಯದ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಸ್ಥಳೀಯರು ಅಳಿದುಳಿದ ತಮ್ಮ ಜಾಗ ಬಿಟ್ಟು ಹೋಗಲು ತಯಾರಿಲ್ಲ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮನೆ ವಿತರಣೆ ಸಂದರ್ಭದಲ್ಲಿ ಬೆಳೆಗಾರರಿಗೆ ಹಾಗೂ ಕೇವಲ ಮನೆ ಕಳೆದುಕೊಂಡವರಿಗೆ ಪ್ರತ್ಯೇಕ ವಿಭಾಗದಡಿ ಮನೆಗಳನ್ನು ನಿರ್ಮಿಸಿಕೊಡುವಂತಾಗಬೇಕೆಂದರು.

ಗ್ರಾಮಸ್ತ ಕುಡೆಕಲ್ ಸಂತೋಷ್ ಮಾತನಾಡಿ, ಪರಿಹಾರೋಪಾಯ ಕಾರ್ಯಗಳು ವಿಳಂಬವಾಗುತ್ತಿವೆ. ಗ್ರಾಮದಲ್ಲಿ ಸಾಕಷ್ಟು ಹಾನಿಯಾಗಿವೆ. ಆದರೆ ಕೆಲವೊಂದು ಮನೆಯವರಿಗೆ ಇದುವರೆಗೆ ಯಾವದೇ ಪರಿಹಾರ ಸಿಕ್ಕಿಲ್ಲ; ಮಕ್ಕಂದೂರು ವ್ಯಾಪ್ತಿಯ ಸಂತ್ರಸ್ತರಿಗೆ ಇನ್ನೂ ಕೂಡ ಮನೆಗೆ ಜಾಗ ನಿಗದಿಯಾಗಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಹಕಾರದೊಂದಿಗೆ ಹೋರಾಟದ ಹಾದಿ ಹಿಡಿಯುವ ಅನಿವಾರ್ಯತೆ ಇದೆ. ಜನಪ್ರತಿನಿಧಿಗಳು ಜನತೆಯೊಂದಿಗೆ ಸಹಕರಿಸಬೇಕೆಂದು ಹೇಳಿದರು. ನಂದಿರ ಸಾಬು ಅವರು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೋರಾಟ ಮಾಡುವದೇ ಅನಿವಾರ್ಯವಾಗಿದೆ. ಗಂಜಿ ಕೇಂದ್ರದಲ್ಲಿ ಊಟ ಮಾಡಿದವರಿಗೆ ಜೈಲಿನಲ್ಲಿ ಊಟ ಮಾಡುವದು ದೊಡ್ಡದೇನಲ್ಲ ಎಂದು ಹೇಳಿದರು.

ಕಾಳಚಂಡ ವಿಜು ಮಾತನಾಡಿ ಕಂದಾಯ ಇಲಾಖೆ ಸಿಬ್ಬಂದಿಗಳು ದರ್ಪದಿಂದ ಮಾತನಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಕಾನೂನು ಕೈಗೆತ್ತಿಕೊಂಡರೂ ಅಚ್ಚರಿಯಿಲ್ಲವೆಂದು ಆಕ್ರೋಶಿತರಾಗಿ ನುಡಿದರು.

ತಂಬುಕುತ್ತಿರ ಮಧು ಮಂದಣ್ಣ ಜಿಲ್ಲಾಧಿಕಾರಿಗಳು ಬೇರೆ ಕಡೆಗಳಲ್ಲಿ ಜನ ಸಂಪರ್ಕ ಸಭೆ ಮಾಡಿದ್ದಾರೆ. ಅತಿಹೆಚ್ಚು ಹಾನಿಗೀಡಾಗಿರುವ ಮಕ್ಕಂದೂರು ವ್ಯಾಪ್ತಿಯಲ್ಲಿ ಮಾಡಿಲ್ಲ; ಯಾವದೇ ಮಾಹಿತಿಯೂ ನೀಡುತ್ತಿಲ್ಲ. ಇನ್ನಾದರೂ ಸಭೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಲಿ. ಮಕ್ಕಂದೂರು ಗ್ರಾಮಕ್ಕೆ ಎಷ್ಟು ಪರಿಹಾರ ನೀಡಿದ್ದಾರೆಂಬ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.

ಸುಂದರ ಮಾತನಾಡಿ ಜಹಾಂಗೀರ್ ಪೈಸಾರಿಗೆ ತೆರಳಲು ಯಾವದೇ ಸಂಪರ್ಕ ರಸ್ತೆಯಿಲ್ಲ. ಮನೆ ತೆರವಿಗೆ ಆದೇಶಿಸಿದ್ದಾರೆ. ತೆರವುಗೊಳಿಸುವವರೆಗೆ ನಾವುಗಳು ಹೇಗೆ ಓಡಾಡೋದು, ಈ ಬಗ್ಗೆಯಾದರೂ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಈ ಬಗ್ಗೆ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಕಾವೇರಮ್ಮ ಹರೀಶ್, ಉಪಾಧ್ಯಕ್ಷ ಕಾಳಚಂಡ ಶ್ಯಾಂ ಸುಬ್ಬಯ್ಯ, ಸದಸ್ಯರುಗಳಾದ ವಿಮಲ ರವಿ, ರತಿ ಇದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತ ಗ್ರಾಮಸ್ತರು ನೆರೆದಿದ್ದರು.