ಗೋಣಿಕೊಪ್ಪಲು, ನ. 28: ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ಸಮಾಜ ದೂರವಿಡಬೇಕೆಂದು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ದ. ಕೊಡಗಿನ ಬಾಳೆಲೆ ಗ್ರಾಮದಲ್ಲಿರುವ ನುಸ್ರತುಲ್ ಇಸ್ಲಾಂ ಜುಮಾ ಮಸ್ಜಿದ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲೋಕ ಅನುಗ್ರಹಿ ಮಹಮ್ಮದ್ ಮುಸ್ತಫರವರ 1493ನೇ ಜನ್ಮ ದಿನಾಚರಣೆ ಅಂಗವಾಗಿ ನೂರೇ ಮದೀನ ಈದ್ ಮಿಲಾದ್ ಪ್ರಯುಕ್ತ ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು, ಇಂದು ಜಾತಿ, ಧರ್ಮದ ವಿಚಾರದಲ್ಲಿ ಪರಸ್ಪರ ಪ್ರೀತಿ ಬಾಂಧವ್ಯಗಳು ಹಾಳಾಗುತ್ತಿವೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ರಾಜಕಾರಣಿಗಳಿಂದ ದೇಶದಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಸೌಹಾರ್ಧ ಕಾರ್ಯಕ್ರಮಗಳ ಮೂಲಕ ನಾವುಗಳು ಚಿಂತನಶೀಲರಾಗಿ ಬದಲಾವಣೆಯಾಗಬೇಕು. ವೇದಿಕೆಯಲ್ಲಿ ಬಂದು ಮಾತನಾಡುವ ಜನ ತಾನು ಮಾತನಾಡಿದನ್ನು ವೇದಿಕೆಯಿಂದ ಇಳಿಯುವ ಸಮಯ ಮರೆಯುತ್ತಾರೆ. ಮಾನವೀಯತೆ ಮರೆಯಾಗುತ್ತಿದೆ. ಧರ್ಮದ ವಿಚಾರದಲ್ಲಿ ವಿಷಬೀಜ ಬಿತ್ತುವವರನ್ನು ಸಮಾಜ ದೂರವಿಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡಬೇಕೆಂದು ಕರೆ ನೀಡಿದರು.

ಬಾಳೆಲೆಯ ಜುಮಾ ಮಸೀದಿ, ಅಧ್ಯಕ್ಷ ಎಂ.ಎಂ. ಫಯಾಝ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ವನ್ನು ಜುಮಾ ಮಸೀದಿಯ ಖತೀಬರಾದ ಝೈನುದ್ದೀನ್ ಉದ್ಘಾಟಿಸಿದರು.

ಮುಖ್ಯ ಭಾಷಣಕಾರರಾಗಿ ಕೊಳಕೇರಿಯ ಶುಹೈಬ್ ಫೈಝಿ ಮಾತನಾಡಿ, ಭಾರತ ದೇಶ ಹಲವು ಧರ್ಮ ಭಾಷೆಗಳನ್ನು ಹೊಂದಿರುವ ದೇಶವಾಗಿದೆ. ಇದೀಗ ಯುವ ಸಮೂಹ ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಸಾಗುತ್ತಿರುವದು ಅಪಾಯಕಾರಿ ಬೆಳವಣಿಗೆ ಮಾನವೀಯತೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಕೋಮವಾದ, ಭಯೋತ್ಪಾದನೆ ಅಪಾಯಕಾರಿ ಬೆಳವಣಿಗೆ ಸ್ವಾರ್ಥ ರಾಜಕೀಯ ರಾಜಕಾರಣದಿಂದ ಕೆಲವೆಡೆ ಗಲಭೆಗಳಾಗುತ್ತಿರುವದು ಆತಂಕಕಾರಿ ಬೆಳವಣಿಗೆ ಏನೇ ಎದುರಾದರು ನಾವೆಲ್ಲರು ಸಹೋದರತೆಯಿಂದ ಬದುಕಬೇಕು. ಧರ್ಮದ ಹೆಸರಿನಲ್ಲಿ ಇಲ್ಲಸಲ್ಲದ ಮಾತುಗಳಿಗೆ ಬೆಲೆ ಕೊಡದಿರಿ, ಎಲ್ಲಾ ಧರ್ಮದಲ್ಲೂ ಶಾಂತಿಯನ್ನು ಬಯಸುವ ದೇಶ ನಮ್ಮದು ಎಂದು ಹೇಳಿದರು.

ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಇಂತಹ ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ಧತೆಯಿಂದ ಕಾರ್ಯಕ್ರಮ ನಡೆಯುತ್ತಿರುವದು ಸಂತೋಷದ ವಿಷಯ. ಮುಸ್ಲಿಂ ಬಾಂಧವರು ಇಲ್ಲದ ಭಾರತ ನಿರ್ಮಾಣ ಸಾಧ್ಯವಾಗದು. ನಾವೆಲ್ಲರೂ ಸ್ನೇಹ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕು. ಮತ್ತೊಬ್ಬರಿಗೆ ಸಹಕಾರಿಯಾಗಿ ಬದುಕಬೇಕು ಎಲ್ಲಾ ಧರ್ಮದ ಮೂಲಗಳು ಒಂದೇ ಆಗಿವೆ ಎಂದರು.

ಮತ್ತೋರ್ವ ಅತಿಥಿ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ ನಾವೆಲ್ಲರೂ ಸೌಹಾದರ್Àತೆಯಿಂದ ಜೀವನ ಸಾಗಿಸಿದ್ದಲ್ಲಿ ಯಾವದೇ ತೊಂದರೆ ಎದುರಾಗುವದಿಲ್ಲ ಎಂದರು. ಹಿತರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಸೋದರತೆ ಯಿಂದ ಬದುಕು ಸಾಗಿಸುತ್ತಿದ್ದೇವೆ. ಮುಂದೆ ಇದೇ ರೀತಿಯಲ್ಲಿ ಬದುಕೋಣ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ಕೆ.ಬಿ. ಮಹೇಶ್ ಕುಮಾರ್, ಸದಸ್ಯ ಪೋಡಮಡ ಸುಖೇಶ್ ಭೀಮಯ್ಯ, ಮಾಜಿ ಸದಸ್ಯ ಆದೇಂಗಡ ವಿನು ಉತ್ತಪ್ಪ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಜೆಡಿಎಸ್ ಮುಖಂಡ ಮಲ್ಚಿರ ದೇವಯ್ಯ, ಬಾಳೆಲೆ ಜಮಾಅತ್ ಸ್ವಲಾತ್ ಕಮಿಟಿಯ ಪ್ರ.ಕಾರ್ಯದರ್ಶಿ ಟಿ.ಎ. ಷಂಶುದ್ದೀನ್, ಕಾರ್ಯದರ್ಶಿ ಅಬ್ದುಲ್ಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ನುಸ್ರತುಲ್ ಇಸ್ಲಾಂ ಜುಮಾ ಮಸ್ಜಿದ್‍ನ ಹನೀಫ್ ದಾರಿಮಿ ಸದರ್ ಮೊಹಲಿಮ್ ಪ್ರಾರ್ಥಿಸಿದರು. ಜುಮಾ ಮಸೀದಿಯ ಉಪಾಧ್ಯಕ್ಷ ಹನೀಫ ಸ್ವಾಗತಿಸಿ, ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.