ವೀರಾಜಪೇಟೆ, ನ. 28: ಕೊಡಗಿನ ರೈತರು ಶ್ರಮಪಟ್ಟು ಬೆಳೆ ಬೆಳೆದರೂ ಅದಕ್ಕೆ ಸರಿಯಾದ ಬೆಲೆಇಲ್ಲದ ಕಾರಣ ರೈತರು ಕಂಗಲಾಗಿದ್ದಾರೆ. ಸರಕಾರ ರೈತರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಿ ಕೃಷಿಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಕೊಡಗು ಜಿಲ್ಲಾ ಪಂಚಾಯತ್, ವೀರಾಜಪೇಟೆ ತಾಲೂಕು ಕೃಷಿ ಇಲಾಖೆ ವತಿಯಿಂದ ವೀರಾಜಪೇಟೆ ಸಮೀಪದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹೇಶ್ ಗಣಪತಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭತ್ತಕ್ಕೆ ಸರಿಯಾದ ಬೆಲೆ ಇಲ್ಲದ ಕಾರಣ ಗದ್ದೆಗಳನ್ನು ನಾಟಿ ಮಾಡುವದೇ ಕಡಿಮೆಯಾಗಿದೆ. ರೈತರು ಬೆಳೆಯುವ ಬೆಳೆಗೆ ಅಧಿಕಾರಿಗಳು ರಾಸಾಯನಿಕ ಗೊಬ್ಬರ ಕಡಿಮೆಮಾಡಿ, ಸಾವಯುವ ಗೊಬ್ಬರದ ಬಗ್ಗೆ ಹೆಚ್ಚು ಮಾಹಿತಿಯನ್ನು ಗ್ರಾಮ ಮಟ್ಟದಲ್ಲಿ ನೀಡುವಂತಾಗಬೇಕು. ಸರಕಾರ ರೈತರಿಗೆ ಪಂಪ್ ಸೆಟ್ ಹಾಗೂ ಕೃಷಿ ಯಂತ್ರಗಳನ್ನು ನೀಡಿ ಉಚಿತ ಗಿಡಗಳನ್ನು ವಿತರಣೆ ಮಾಡಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ ಕೃಷಿ ಬೆಳವಣಿಗೆಯಲ್ಲಿ ಅನೇಕ ಸಮಸ್ಯೆಗಳಿದ್ದು ಸರಕಾರ ಮತ್ತು ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಬೇಕು. ಕೊಡಗಿನಲ್ಲಿ ಅನೇಕ ರೈತರು ಹಲವು ವರ್ಷಗಳಿಂದಲೂ ಭತ್ತ ಬೆಳೆಯುತ್ತಿದ್ದರೂ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಸಮಸ್ಯೆಯಿಂದಾಗಿ ಸರಿಯಾದ ಬೆಲೆ ಸಿಗದ ಕಾರಣ ಕಾರ್ಮಿಕರಿಗೆ ಸಂಭಾವನೆ ನೀಡುವದು ಹಾಗೂ ಇತರ ವೆಚ್ಚಗಳು ಹೆಚ್ಚಾಗಿರುವದರಿಂದ ಗದ್ದೆ ನಾಟಿ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ ಒಣ ಹುಲ್ಲು ಮಾರಾಟ ಮಾಡಲು ನ್ಯಾಯ ಸಮ್ಮತವಾದ ಬೆಲೆಯೂ ಇಲ್ಲದಂತಾಗಿದೆ ಈ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ಸರಕಾರಕ್ಕೆ ಮುಟ್ಟಿಸುವಂತಹ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪಂಡೇರಂಡ ಭವ್ಯ ಅವರು, ಕೃಷಿವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಕೃಷಿಕರು ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು ಹೆಚ್ಚು ಬೆಳೆ ಬೆಳೆಯುವಂತಾಗಬೇಕು. ಸ್ತ್ರೀ ಶಕ್ತಿ ಸಂಘಗಳ ಸದಸ್ಯರುಗಳು ಮನೆಯಲ್ಲಿ ಬಿಡುವಿನ ಸವiಯದಲ್ಲಿ ತರಕಾರಿ ಸೊಪ್ಪುಗಳನ್ನು ಬೆಳೆಯುವದು ಮತ್ತು ಮೀನು ಸಾಕಾಣಿಕೆಗೂ ಮುಂದಾಗಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಡಗು ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಚೋಟು ಕಾವೇರಪ್ಪ ಅವರು ಮಾತನಾಡಿ ರೈತರು ನೀರಾವರಿ ಭೂಮಿಯಲ್ಲಿ ಭತ್ತ ಬೆಳೆಯುವಂತಾಗಬೇಕು. ಮಳೆಯ ನೀರನ್ನು ಶೇಖರಣೆ ಮಾಡಿ ತರಕಾರಿ ಹಾಗೂ ಇತರ ಬೆಳೆಯನ್ನು ಬೆಳೆಯುವಂತೆ ಹೇಳಿದರು. ವೀರಾಜಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಲವೀನ್ ಮಾದಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲೂಕಿನಲ್ಲಿ ಉತ್ತಮ ಭತ್ತದ ಬೆಳೆ ಬೆಳೆದಿರುವ ಮೈತಾಡಿ ಗ್ರಾಮದ ಬಿ.ಕೆ.ರಮೇಶ್ ಅವರಿಗೆ ಉತ್ತಮ ಬೆಳೆಗಾರನೆಂದು ಕೃಷಿ ಇಲಾಖೆ ತೀರ್ಮಾನಿಸಿ ಸಭೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಂಡ ಬೆಳ್ಯಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಬೆಳೆಗಳ ವಿಷಯ ತಜ್ಞ ಡಾ, ಪ್ರಭಾಕರ್, ಕೀಟ ರೋಗ ತಜ್ಞ ಡಾ.ವಿರೇಂದ್ರಕುಮಾರ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡಾ. ಕಾವೇರಮ್ಮ ಅವರಿಂದ ರೈತ ಸಂವಾದ ಕಾರ್ಯಕ್ರಮ ನಡೆಯಿತು. ಕೃಷಿ ಸಹಾಯಕ ನಿರ್ದೇಶಕಿ ರೀನಾ ಅವರು ಸ್ವಾಗತಿಸಿದರು.

ಹೋಬಳಿ ಮಟ್ಟದ ಕೃಷಿ ಅಭಿಯಾನದ ವಸ್ತು ಪ್ರದರ್ಶನದಲ್ಲಿ ಕೃಷಿ ಇಲಾಖೆಯ ಭತ್ತದ ಬೀಜ, ಮಣ್ಣು ಪರೀಕ್ಷೆ ಹಾಗೂ ಕೃಷಿಯ ಲಾಭಗಳ ಯಂತ್ರ, ಪಶು ಸಂಗೋಪನಾ ಇಲಾಖೆಯಿಂದ ಹೈನುಗಾರಿಕೆ ಸೌಲಭ್ಯಗಳು, ಮಿನಿ ಟ್ರಾಕ್ಟರ್, ಸ್ಪಿಂಕ್ಲರ್ ಮಿಷನ್, ಮೀನು ಕೃಷಿ ಹಾಗೂ ಸ್ವ ಸಹಾಯ ಸಂಘಗಳು ಬೆಳೆದ ಬೆಳೆಯನ್ನು ಮಾರಾಟ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.