ಸೋಮವಾರಪೇಟೆ, ನ. 29: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ. 10 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿರುವ ಹೊಸತೋಟ-ಗರಗಂದೂರು ರಸ್ತೆ ಕಾಮಗಾರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು.

ಸೋಮವಾರಪೇಟೆಯಿಂದ ಮಾದಾಪುರ, ಸುಂಟಿಕೊಪ್ಪ, ಮಡಿಕೇರಿ ಮಾರ್ಗವಾಗಿ ತೆರಳಲು ಹತ್ತಿರದ ರಸ್ತೆಯಾಗಿರುವ ಹೊಸತೋಟ-ಗರಗಂದೂರು-ಚನ್ನಮ್ಮ ಕಾಲೇಜು ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಇದರೊಂದಿಗೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕರು ಸಂಬಂಧಿಸಿದ ಅಭಿಯಂತರ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.

ಸುಮಾರು 6 ಕಿ.ಮೀ. ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ರಸ್ತೆ ಅಗಲೀಕರಣ, ಮೋರಿಗಳ ನಿರ್ಮಾಣ, ಕಾಂಕ್ರಿಟೀಕರಣ ಕೆಲಸಗಳು ಮುಗಿದಿದೆ. ಇನ್ನೂ 5 ಕಿ.ಮೀ. ಡಾಂಬರು ಅಳವಡಿಸಬೇಕಿದೆ. ಮಡಿಕೇರಿ ಸೇರಿದಂತೆ ಸುಂಟಿಕೊಪ್ಪಕ್ಕೆ ತೆರಳಲು ಸೋಮವಾರಪೇಟೆ ಭಾಗದಿಂದ ಹತ್ತಿರದ ರಸ್ತೆ ಇದಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ರಂಜನ್ ಅಭಿಪ್ರಾಯಿಸಿದರು.