ಸಿದ್ದಾಪುರ, ನ. 28 : ಶಾಶ್ವತ ಕಸವಿಲೇವಾರಿಗೆ ಜಾಗದ ಕೊರತೆಯನ್ನು ಎದುರಿಸುತ್ತಿರುವ ಸಿದ್ದಾಪುರ ಗ್ರಾಮ ಪಂಚಾಯತ್, ಕಸ ವಿಲೇವಾರಿ ಹೆಸರಿನಲ್ಲಿ ಪಟ್ಟಣದ ಸಮೀಪ ಜನ ವಸತಿ, ಹಾಗೂ ಖಾಸಗಿ ಆಸ್ಪತ್ರೆಯ ಬಳಿ, ಕಸ ವಿಲೇವಾರಿ ಮಾಡಿ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾಗಿದೆ.

ಸಿದ್ದಾಪುರದ ಕರಡಿಗೋಡು ರಸ್ತೆಯಲ್ಲಿರುವ ಕಂದಾಯ ಇಲಾಖೆಗೆ ಸೇರಿದ ಜಾಗದ ವಿಷಯಕ್ಕೆ ಸಂಬಂಧಿಸಿ ಕಳೆದ ಎರಡು ದಿನಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗಳು ನಡೆದಿದ್ದು, ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಕೆಲವು ಸದಸ್ಯರು ಕಸ ವಿಲೇವಾರಿ ಮಾಡದಂತೆ ಹಾಗೂ ಪಂಚಾಯಿತಿಗೆ ಸೇರದ ಜಾಗದಲ್ಲಿ, ಯಾವದೇ ಕಾಮಗಾರಿಯನ್ನು ಮಾಡದಂತೆ ಆಕ್ಷೇಪಣೆ ಸಲ್ಲಿಸಿ ಪಂಚಾಯಿತಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೆ, ಅಧ್ಯಕ್ಷರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಕೂಡ ಸದಸ್ಯರುಗಳ ಮಾತಿಗೆ ಮನ್ನಣೆ ನೀಡದ, ಪಂಚಾಯಿತಿ ಇದೀಗ ಏಕಾ ಏಕಿ ಕಂದಾಯ ಇಲಾಖೆಗೆ ಸೇರಿದ ಕರಡಿಗೋಡು ರಸ್ತೆಯಲ್ಲಿ ಜೆಸಿಬಿ ಮೂಲಕ ಗುಂಡಿ ತೋಡಿ, ಕಸ ಹಾಗೂ ತ್ಯಾಜ್ಯಗಳನ್ನು ಸುರಿಯಲು ಮುಂದಾಗಿರುವದನ್ನು ಆ ಭಾಗದ ನಿವಾಸಿಗಳು ಖಂಡಿಸಿದ್ದಾರೆ.

ಪಂಚಾಯಿತಿ ಸಭೆಯಲ್ಲಿ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮಹಿಳಾ ಸಂಘ ಹಾಗೂ ಪತ್ರಕರ್ತರ ಸಂಘಕ್ಕೆ ಕಟ್ಟಡ ನಿರ್ಮಿಸಲು ಜಾಗ ನೀಡುವಂತೆ ಕೆಲವು ಸದಸ್ಯರುಗಳು ಪ್ರಸ್ತಾಪಿಸಿದ್ದರು. ಆದರೆ ಪಂಚಾಯಿತಿಯು ಗ್ರಾಮದಲ್ಲಿ ಸ್ವಚ್ಚತೆಯನ್ನು ಕಾಪಾಡುವ ಬದಲು ಹಾಗೂ ಕಸವಿಲೇವಾರಿಗೆ ಸೂಕ್ತ ಜಾಗವನ್ನು ಕಂಡು ಹಿಡಿಯುವಲ್ಲಿ ವಿಫಲಗೊಂಡು, ಇದೀಗ ಸಾರ್ವಜನಿಕರು, ಶಾಲಾ ಮಕ್ಕಳು ಓಡಾಡುವ ರಸ್ತೆ ಬದಿಯಲ್ಲಿ ಗುಂಡಿ ತೋಡಿ, ಕಸವಿಲೇವಾರಿ ಮಾಡಲು ಯತ್ನಿಸುತ್ತಿರುವದು ಖಂಡನೀಯ. ರಸ್ತೆ ಬದಿಯಲ್ಲಿ ಅವೈಜಾÐನಿಕ ರೀತಿಯಲ್ಲಿ ಕಸವಿಲೇವಾರಿ ಮಾಡುತ್ತಿರುವದರಿಂದ ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಮಾಜಿ ಗ್ರಾ.ಪಂ ಅಧ್ಯಕ್ಷೆವಿಮಲಾ ನಾಣಯ್ಯ ಮಾತನಾಡಿ, ಪಂಚಾಯಿತಿಯು ಜನವಸತಿ ಪ್ರದೇಶದಲ್ಲಿ ದಿಢೀರನೆ ಕಸವಿಲೇವಾರಿಗೆ ಮುಂದಾಗಿರುವದು ಸರಿಯಾದ ಕ್ರಮವಲ್ಲ, ಕೂಡಲೇ ಬೇರೆಡೆಯಲ್ಲಿ ಕಸವಿಲೇವಾರಿ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ ಸಂಬಂಧಪಟ್ಟ ತಾಲೂಕು Pಚೇರಿ ಹಾಗೂ ನಾಡು ಕಚೇರಿಗೆ ದೂರು ನೀಡಲಾಗುವದೆಂದು ತಿಳಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಯಾವದೇ ಮಾಹಿತಿಯನ್ನು ನೀಡದೆ, ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಗುಂಡಿ ತೋಡಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವದಾಗಿ ಕಂದಾಯ ಪರಿವೀಕ್ಷಕ ವಿನು ತಿಳಿಸಿದರು.