ವೀರಾಜಪೇಟೆ, ನ. 29: ವೀರಾಜಪೇಟೆಯ ಮಿನಿ ವಿಧಾನಸೌಧದ ಮುಂದೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಅನಿರ್ದಿಷ್ಟಕಾಲ ಧರಣಿ ಮುಷ್ಕರ ನಡೆಯುತ್ತಿದ್ದರೂ ಸಂಘಟನೆಯ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿರುವದರಿಂದ ತಾ:30ರಿಂದ (ಇಂದಿನಿಂದ) ಉಪವಾಸ ಮುಷ್ಕರ ನಡೆಸಲು ಸಂಘಟನೆ ತೀರ್ಮಾನಿಸಿರುವದಾಗಿ ರಾಜ್ಯ ಸಮಿತಿಯ ವಿಭಾಗ ಸಂಚಾಲಕ ಎಚ್.ಎಸ್. ಕೃಷ್ಣಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ತಾಲೂಕಿನ ಅಧಿಕಾರಿಗಳಿಗೆ ಸಂಘಟನೆ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರೆ ಅದನ್ನು ಈಡೇರಿಸುವದನ್ನು ಬಿಟ್ಟು ಹಾರಿಕೆಯ ಉತ್ತರ ನೀಡುತ್ತಾರೆ. ಇಂದು ಬೆಳಿಗ್ಗೆ ಧರಣಿ ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಇಲ್ಲಿನ ಪ್ರಭಾರ ತಹಶೀಲ್ದಾರ್ ಬಸವರಾಜು ಅವರು ಮಿನಿ ವಿಧಾನಸೌಧದ ಆವರಣದಿಂದ ಜಾಗ ತೆರವುಗೊಳ್ಳದಿದ್ದರೆ ‘ಸರಕಾರಿ ಕರ್ತವ್ಯಕ್ಕೆ ಅಡ್ಡಿ’ಪಡಿಸಿದರೆಂದು ಪ್ರಕರಣ ದಾಖಲಿಸಲಾಗುವದು ಎಂದು ಬೆದರಿಕೆ ಹಾಕಿದ್ದಾರೆ. ಬೆದರಿಕೆಯಿಂದ ವಿಚಲಿತರಾಗುವದಿಲ್ಲ. ಬಂಧನಕ್ಕೂ ಹೆದರುವದಿಲ್ಲ ಎಂದು ಕೃಷ್ಣಪ್ಪ ತಿಳಿಸಿದರು.

ಉಪವಾಸ ಸತ್ಯಾಗ್ರಹದಿಂದ ಯಾವದೇ ದುರಂತ ಸಂಭವಿಸಿದರೂ ಅದಕ್ಕೆ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿ ಹೊಣೆಯಾಗಲಿದ್ದಾರೆ ಎಂದು ಜಿಲ್ಲಾ ಸಮಿತಿ ಖಜಾಂಚಿ ಎಚ್.ಎನ್. ಕುಮಾರ್ ಮಹದೇವ್ ಹೇಳಿದರು.

ಸಂಘಟನೆಯ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಲು ಕೊಡಗಿನ ಉಸ್ತುವಾರಿ ಸಚಿವರು, ಪಕ್ಷದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆಗೂ ಸುದ್ದಿ ಮುಟ್ಟಿಸಿರುವದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿಯ ಪರಿಶಿಷ್ಟ ಘಟಕದ ಅಧ್ಯಕ್ಷ ವಿ.ಕೆ. ಸತೀಶ್‍ಕುಮಾರ್ ತಿಳಿಸಿದರು.

ಇಂದು 250ಕ್ಕೂ ಅಧಿಕ ಮಂದಿ ಮುಷ್ಕರದಲ್ಲಿ ನಿರತರಾಗಿದ್ದು, ಮಿನಿ ವಿಧಾನಸೌಧದ ಪಕ್ಕದಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು. ಮುಷ್ಕರ ನಿರತರಲ್ಲಿ ಅಧಿಕವಾಗಿ ಮಹಿಳೆಯರು ಎರಡರಿಂದ ನಾಲ್ಕು ವರ್ಷವರೆಗಿನ ಮಕ್ಕಳು ಇದ್ದರು.

ಸಂಘಟನೆಯ ಮುಖಂಡರು ಗಳಾದ ಎಚ್.ಆರ್.ಪರಶುರಾಮ್, ಆಂತರಿಕ ಶಿಸ್ತು ತರಬೇತಿ ವಿಭಾಗದ ವಿ.ಆರ್.ರಜನಿಕಾಂತ್ ಮತ್ತಿತರರು ಹಾಜರಿದ್ದರು. ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಮುಖಂಡರು, ಕಾರ್ಯಕರ್ತರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಧರಣಿ ಮುಷ್ಕರದ ಪ್ರಯುಕ್ತ ಇಂದು ಸಂಜೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆಯನ್ನು ತಾಲೂಕು ಪ್ರಭಾರ ತಹಶೀಲ್ದಾರ್ ಬಸವರಾಜು ಅವರ ಸಮ್ಮುಖದಲ್ಲಿ ಏರ್ಪಡಿಸ ಲಾಗಿತ್ತು. ಸಂಘಟನೆಯ ಮುಖಂಡರುಗಳು ಅಧಿಕಾರಿಗಳು ಮಂಡಿಸಿದ ಯಾವದೇ ನಿರ್ಧಾರಕ್ಕೆ ಸಮ್ಮತಿಸದೆ ಸಭೆಯಿಂದ ಹೊರಬಂದು ಜಿಲ್ಲೆಯ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದ ನಂತರ ಖುದ್ದು ಮನವಿ ಸಲ್ಲಿಸಿ ಅವರ ಲಿಖಿತ ಹಾಗೂ ಖಚಿತ ಭರವಸೆ ಮೇರೆ ನಂತರ ಧರಣಿ ಮುಷ್ಕರವನ್ನು ಮುಂದೂಡುವದಾಗಿ ತಿಳಿಸಿದರು.

ಧರಣಿ ಮುಷ್ಕರದ ಹಿನ್ನೆಲೆ ಇಂದು ಸಂಜೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಈಗಾಗಲೇ ವಿವಿಧ ಇಲಾಖೆಗಳ ವತಿಯಿಂದ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿವೇಶನ ರಹಿತ ಬಿಟ್ಟು ಹೋದ ಫಲಾನುಭವಿಗಳನ್ನು ಖುದ್ದು ಪರಿಶೀಲನೆ ನಡೆಸಿ ನಿವೇಶನ ರಹಿತ ಪಟ್ಟಿಗೆ ಸೇರ್ಪಡೆಗೊಳಿಸ ಲಾಗುವದು. ನಿವೇಶನ ರಹಿತರಿಗೆ ಮನೆ ಕಟ್ಟಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವದು. ಇದಕ್ಕಾಗಿ ಸಂಘಟನೆಯ ಆಯ್ದ ಮುಖಂಡರು ಗಳನ್ನೊಳಗೊಂಡಂತೆ ಅಧಿಕಾರಿಗಳು ಸೇರಿದಂತೆ ಸಮಿತಿಯೊಂದನ್ನು ರಚಿಸಲಾಗುವದು. ಈ ಸಮಿತಿ ಪ್ರತಿ 15 ದಿನಕೊಮ್ಮೆ ಸೇರಿ ನಿವೇಶನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಿದೆ. ಯಾವದೇ ತಾರತಮ್ಯವಿಲ್ಲದೆ ಸಮಿತಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಧರಣಿ ಮುಷ್ಕರ ನಿರತರು, ನಿವೇಶನ ರಹಿತರಿಗೆ ಒಳಿತಾಗಲಿದೆ. ಈ ಸಮಿತಿ ನಿವೇಶನ ರಹಿತರು ಮನೆ ಕಟ್ಟುವ ತನಕ ಕಾರ್ಯ ನಿರ್ವಹಿಸಲಿದೆ ಎಂದು ಸಭೆ ತೀರ್ಮಾನಿಸಿತು.

ಈ ಸಂಧಾನ ಸಭೆಯ ತೀರ್ಮಾನದಿಂದ ಹೊರ ಬಂದ ಸಂಘಟನೆಯ ಮುಖಂಡರು ಈ ಸಂಧಾನ ಸಂಘಟನೆಗೆ ತೃಪ್ತಿದಾಯಕ ವಾಗಿಲ್ಲ. ಈ ಮಾತುಕತೆ ಕೊಡಗಿನ ಉಸ್ತುವಾರಿ ಸಚಿವರ ಮುಂದೆ ಸಭೆ ನಡೆದು ದಾಖಲೆಯ ಪ್ರಕಾರ ಲಿಖಿತ ಭರವಸೆ ನೀಡಿದರೆ ಮಾತ್ರ ಧರಣಿ ಮುಷ್ಕರ ಹಿಂಪಡೆಯಲಾಗುವದು ಎಂದು ತಿಳಿಸಿದರು.