ಮಡಿಕೇರಿ, ನ. 29: ಒಂದು ಲಕ್ಷ ರೂ. ಸಾಲ ಕೊಡಿಸುವದಾಗಿ ಮಹಿಳೆಯರನ್ನು ನಂಬಿಸಿ ಅವರಿಂದ ಸಾವಿರಾರು ರೂಪಾಯಿ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡು ನಂತರ ಪಂಗನಾಮ ಹಾಕುವ ಜಾಲವೊಂದು ಮಡಿಕೇರಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ಲಭ್ಯವಾಗಿದೆ.ಮಡಿಕೇರಿ ಮಾರುತಿ ಫೈನಾನ್ಸ್ ಎಂಬ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳು ಮೇಕೇರಿ ಕಾವೇರಿ ಬಡಾವಣೆಯ ಕೂಲಿ ಕಾರ್ಮಿಕೆ ಲೀಲಾವತಿ ಎಂಬವರ ಮನೆಗೆ ಇತ್ತೀಚೆಗೆ ತೆರಳಿ ಅವರ ಪುತ್ರಿಯಿಂದ ಲೀಲಾವತಿ ಅವರ ದೂರವಾಣಿ ಸಂಖ್ಯೆ ಪಡೆದುಕೊಂಡು ಬಳಿಕ ಲೀಲಾವತಿ ಅವರಿಗೆ ದೂರವಾಣಿ ಕರೆ ಮಾಡಿ 1 ಲಕ್ಷ ರೂ. ಸಾಲ ಸೌಲಭ್ಯ ನೀಡುವದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಲೀಲಾವತಿ ಅವರು ಏಳೆಂಟು ಮಹಿಳೆಯರನ್ನು ಒಟ್ಟು ಸೇರಿಸಿ ಸಾಲ ಸೌಲಭ್ಯದ ವಿಚಾರವನ್ನು ಹೇಳಿದ್ದು, ಎಲ್ಲರೂ ಸಾಲ ಪಡೆಯಲು ತೀರ್ಮಾನಿಸಿದ್ದಾರೆ.ಮಹಿಳೆಯರ ದೌರ್ಬಲ್ಯವನ್ನರಿತ ವಂಚಕರು ಮತ್ತೊಮ್ಮೆ ಕರೆ ಮಾಡಿ ಆಧಾರ್ ಕಾರ್ಡ್ ಮಾಹಿತಿ ಪಡೆದು ಸಾಲಕ್ಕಾಗಿ ಇನ್‍ಶ್ಯುರೆನ್ಸ್ ಹಣ ಕಟ್ಟುವಂತೆ ಸೂಚಿಸಿದ್ದಾರೆ. 1 ಲಕ್ಷ ಸಾಲಕ್ಕೆ ರೂ. 670, 50 ಸಾವಿರ ರೂ ಸಾಲಕ್ಕೆ 520 ರೂ. ನಂತೆ ಪಾವತಿಸಲು ತಿಳಿಸಿ ಪ್ರಭಾಕರನ್ ಎಂಬ ಹೆಸರಿನ ಕೆನರಾ ಬ್ಯಾಂಕ್‍ನ ಖಾತೆ ಸಂಖ್ಯೆಯನ್ನು ನೀಡಿದ್ದಾರೆ.

ಎಂಟು ಮಂದಿ ಮಹಿಳೆಯರು ವಂಚನೆಯ ಸುಳಿವರಿಯದೆ ಹಣ ಸಂಗ್ರಹಿಸಿ ರೂ. 5210 ಹಣವನ್ನು ಖಾತೆಗೆ ಜಮೆ ಮಾಡಿದ್ದಾರೆ.

ಹಣ ಜಮೆ ಮಾಡಿದ ಬಳಿಕ ಲೀಲಾವತಿ ಅವರಿಂದಲೆ ದೂರವಾಣಿ ಮೂಲಕ ಹಣ ಜಮೆ ಆಗಿರುವ ಬಗ್ಗೆ ಖಚಿತ ಪಡಿಸಿಕೊಂಡ ಆ ವ್ಯಕ್ತಿಗಳು ಬಳಿಕ ಲೀಲಾವತಿ ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ.

ಇದರಿಂದ ಗಾಬರಿಗೊಂಡ ಅವರು ಬ್ಯಾಂಕ್‍ನಲಿ ವಿಚಾರಿಸಿದಾಗ ಆ ಖಾತೆ ಪಾಂಡಿಚೇರಿ ವ್ಯಾಪ್ತಿಯ ವ್ಯಕ್ತಿಯ ಖಾತೆ ಎಂಬದು ದೃಢಪಟ್ಟಿದೆ. ಖಾತೆ ಹೊಂದಿರುವ ವ್ಯಕ್ತಿಯ ದೂರವಾಣಿ ಸಂಖ್ಯೆ ಪಡೆದು ಸಂಪರ್ಕಿಸಿದರೆ, ಕಾರ್ತಿಕ್ ಎಂಬ ವ್ಯಕ್ತಿ ಕರೆ ಸ್ವೀಕರಿಸುತ್ತಿದ್ದು, ತನಗೂ ಫೈನಾನ್ಸ್‍ಗೆ ಸಂಬಂಧವೇ ಇಲ್ಲ ಎನ್ನುತ್ತಿದ್ದಾನೆ. ಇತ್ತ ಹಣ ಕಳೆದುಕೊಂಡ ಮಹಿಳೆಯರು ಕಂಗಾಲಾಗಿದ್ದಾರೆ. - ಉಜ್ವಲ್