ಮಡಿಕೇರಿ, ನ. 29: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛ ಕ್ವಿಜ್-2018 ಸ್ಪರ್ಧಾ ಕಾರ್ಯಕ್ರಮ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರತಿಯೊಂದು ಮಗುವು ತನ್ನ ಮನೆಯಿಂದಲೇ ಸ್ವಚ್ಛತೆಯ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ದೇಶ ಸ್ವಚ್ಛವಾಗಲು ಸಾಧ್ಯ ಎಂದರು. ಶಾಲೆಗೆ ಹೋಗುವ ವಿದ್ಯಾರ್ಥಿಗಳು ರಸ್ತೆಯಲ್ಲಿ ಕಸ ಬಿದ್ದಿದ್ದರೆ ಅದನ್ನು ನೋಡಿ ಹಾಗೆಯೇ ಹೋಗಬಾರದು. ಕಸವನ್ನು ಕಸದ ಬುಟ್ಟಿಗೆ ಹಾಕಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವಚ್ಛಭಾರತ್ ಯೋಜನೆಯನ್ನು ರೂಪಿಸಿದ್ದು ದೇಶದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಿದ್ದಾರೆ. ಸ್ವಚ್ಛತೆ ಎನ್ನುವದು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಮನೆಮನೆಗಳಲ್ಲಿ ಸ್ವಚ್ಛತೆಯ ಪರಿಕಲ್ಪನೆ ಮೂಡಬೇಕು ಎಂದರು.

ಮತ್ತೋರ್ವ ಅತಿಥಿ ನಗರಸಭೆ ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ, ಸ್ವಚ್ಛತೆ ಎನ್ನುವದು ಒಂದು ದಿನದ ಕಾರ್ಯಕ್ರಮವಲ್ಲ. ಹಾಗಾಗಿ ಕಸವನ್ನು ಅಲ್ಲಲ್ಲಿ ಎಸೆಯುವವರಿಗೆ ಬುದ್ಧಿ ಮಾತನ್ನು ಹೇಳುವ ಕೆಲಸ ವಿದ್ಯಾರ್ಥಿ ಗಳಿಂದ ಆಗಬೇಕು ಎಂದರು.

ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಪ್ರತಿ ಶಾಲೆಯಿಂದ ತಲಾ 2 ವಿದ್ಯಾರ್ಥಿಗಳಂತೆ ಭಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ , ಪೌರಾಯುಕ್ತ ರಮೇಶ್ ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ವಾಲ್‍ನೆಟ್ ಸಂಸ್ಥೆಯ ಪ್ರಮುಖರಾದ ರಾಘವ್, ಹರ್ಷ ಪಾಲ್ಗೊಂಡಿದ್ದರು.