ಮಡಿಕೇರಿ, ನ.29 : ಕೊಡಗು ಮತ್ತು ಮೈಸೂರು ಸುತ್ತಮುತ್ತಲಿನ ವಿಮಾನಯಾನಿಗಳಿಗೆ ಅತ್ಯಂತ ಸಮೀಪವಾಗಲಿರುವ ಸುಸಜ್ಜಿತ ಅಂತರ್ರಾಷ್ಟ್ರೀಯ ಕಣ್ಣೂರು ವಿಮಾನ ನಿಲ್ದಾಣ ಡಿಸೆಂಬರ್ 9 ರಂದು ಉದ್ಘಾಟನೆಗೊಳ್ಳಲಿದ್ದು, ಅಂದೇ ವಿಮಾನ ಹಾರಾಟ ಆರಂಭವಾಗಲಿದೆ ಯೆಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ತುಳಸೀದಾಸ್ ತಿಳಿಸಿದ್ದಾರೆ.ನಿರ್ಮಾಣ ಕಾರ್ಯ ಪೂರ್ಣ ಗೊಂಡಿರುವ ವಿಮಾನ ನಿಲ್ದಾಣದಲ್ಲಿ ಆಯೋಜಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೂ.2300 ಕೋಟಿ ಗಳ ಬೃಹತ್ ಯೋಜನೆಯ ಕುರಿತು ಮಾಹಿತಿ ನೀಡಿದರು. ಡಿಸೆಂಬರ್ 9 ರಂದು ಬೆಳಗ್ಗೆ 10 ಗಂಟೆಗೆ ಕೇಂದ್ರದ ವಿಮಾನಯಾನ ಸಚಿವ ಸುರೇಶ್ ಪ್ರಭು, ಕಣ್ಣೂರು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಉಪಸ್ಥಿತರಿರುವರು.

ನಿಲ್ದಾಣ ಉದ್ಘಾಟನೆಯಾದ ತಕ್ಷಣ ಅಬುದಾಬಿಗೆ ಮೊದಲ ವಿಮಾನ ಹಾರಾಡಲಿದೆ. ಬೆಂಗಳೂರು ಹೈದರಾಬಾದ್ ಚೆನ್ನೈ, ಮುಂಬಯಿ ಮಾರ್ಗವಾಗಿಯೂ ವಿಮಾನಗಳ ಹಾರಾಟ ಆರಂಭವಾಗಲಿದೆ. ದೇಶೀಯ ಮತ್ತು ವಿದೇಶಿ ವಿಮಾನ ಸಂಸ್ಥೆಗಳು ಕಣ್ಣೂರು ವಿಮಾನ ನಿಲ್ದಾಣದ ಮೂಲಕ ವೈಮಾನಿಕ ಸಂಚಾರಕ್ಕೆ ಆಸಕ್ತಿಯನ್ನು ತೋರಿವೆ. ಈ ವಿಮಾನ ನಿಲ್ದಾಣ ವಾರ್ಷಿಕ ನಿರ್ವಹಣೆಗೆ 400 ಕೋಟಿ ರೂ.ಗಳ ಅಗತ್ಯವಿದ್ದು, ಅಧಿಕ ಆದಾಯವನ್ನು ನಿರೀಕ್ಷಿಸಲಾಗಿದೆ ಯೆಂದು ತುಳಸೀ ದಾಸ್ ತಿಳಿಸಿದರು.

ಕೊಡಗಿನ ವಿಮಾನಯಾನಿಗಳಿಗೆ ಕಣ್ಣೂರು ವಿಮಾನ ನಿಲ್ದಾಣ ಅತ್ಯಂತ ಹತ್ತಿರವಾಗಲಿದೆ. ಅಲ್ಲದೆ, ಕಾಫಿ, ಕರಿಮೆಣಸು, ಆಂಥೋರಿಯಂ ಕಾರ್ಗೋ ಸೇವೆಗೆ ಸಹಕಾರಿ ಯಾಗುವದಲ್ಲದೆ, ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ. ಕರ್ನಾಟಕ ಸರ್ಕಾರ ಹುಣಸೂರು ಮೂಲಕ ಇರ್‍ಟ್ಟಿವರೆಗಿನ ರಸ್ತೆ ಮತ್ತು ಸೇತುವೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಿದೆ ಎಂದು ಅವರು ಇದೇ ಸಂದರ್ಭ ವಿಶ್ವಾಸ ವ್ಯಕ್ತÀಪಡಿಸಿದರು.

(ಮೊದಲ ಪುಟದಿಂದ)

ಹೀಗಿದೆ ವಿಮಾನ ನಿಲ್ದಾಣ

ಕೇರಳದ ಕಣ್ಣೂರು ಅಂತ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ 20 ವಿಮಾನಗಳನ್ನು ನಿಲುಗಡೆಗೊಳಿಸಬಹುದಾಗಿದೆ. 2300 ಎಕರೆ ಪ್ರದೇಶದಲ್ಲಿ ಯೋಜನೆ ಸಾಕಾರಗೊಂಡಿದ್ದು, 2300 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇಲ್ಲಿ 4 ಸಾವಿರ ಮೀಟರ್ ಉದ್ದದ ರನ್ ವೇ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದ ನಾಲ್ಕನೇ ಅತ್ಯಾಧುನಿಕ ವಿಮಾನ ನಿಲ್ದಾಣ ಇದಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಕೇರಳದ ಮೊದಲ ನಿಲ್ದಾಣ ಇದಾಗಿದೆ.

ಮಡಿಕೆÉೀರಿಯಿಂದ 80 ಕಿ.ಮೀ. ದೂರದಲ್ಲಿರುವ ಈ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ವಾಹನಗಳಲ್ಲಿ ಸರಿ ಸುಮಾರು 1.50 ಗಂಟೆ ಅವಧಿಯಲ್ಲಿ ತಲಪಬಹುದಾಗಿದೆ. ವೀರಾಜಪೇಟೆಯಿಂದ 65 ಕಿಮೀ. ದೂರದಲ್ಲಿ ವಿಮಾನ ನಿಲ್ದಾಣವಿದೆ.

ಕಿಡಲೂರು ಗ್ರಾಪಂ ವ್ಯಾಪ್ತಿಯ 2 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕಳೆದ 4 ವರ್ಷಗಳಿಂದ ಇಲ್ಲಿ ಕಾಮಗಾರಿಯನ್ನು ನಡೆಸಲಾಗಿದೆ. ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ವಿಮಾನ ನಿಲ್ದಾಣ 6 ಮಹಡಿಯನ್ನು ಹೊಂದಿದೆ. ದೇಶೀಯ ಮತ್ತು ವಿದೇಶಕ್ಕೆ ತೆರಳುವವರಿಗೆ ಪ್ರತ್ಯೇಕ ಪ್ರವೇಶ ಮಾರ್ಗ ಮತ್ತು ನಿಲ್ದಾಣದ ವ್ಯವಸ್ಥೆಯನ್ನು ಮಾಡಲಾಗಿದೆ. 24 ಚೆಕ್ಕಿಂಗ್ ಕೌಂಟರ್ ಹಾಗೂ ಪ್ರತ್ಯೇಕ ಪೊಲೀಸ್ ಠಾಣೆ ಇದೆ. ವಿಶ್ವ ದರ್ಜೆಯ ಗುಣಮಟ್ಟದ ವಿಮಾನ ನಿಲ್ದಾಣದ ಒಳಾಂಗಣದಲ್ಲಿ ಕೇರಳ ಶೈಲಿಯ ಜನಪದ ಚಿತ್ರಕಲೆಗಳಿಗೆ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಕಣ್ಣೂರು, ಮಲಬಾರ್ ಸಂಸ್ಕøತಿಯನ್ನು ಪ್ರತಿಬಿಂಬಿಸಲಾಗಿದ್ದು, ತೆಯ್ಯಂ ನೃತ್ಯ ಕಲಾವಿದನ ಬೃಹತ್ ಕಲಾಕೃತಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮಲಬಾರ್ ಜನಜೀವನ ಬಿಂಬಿಸುವ ಚಿತ್ರಕಲೆ, ಸಮರ ನೃತ್ಯ ಚಿತ್ರಕಲೆಗಳು ವಿಮಾನ ನಿಲ್ದಾಣದ ಸಭಾಂಗಣದಲ್ಲಿ ಜನರನ್ನು ಆಕರ್ಷಿಸುತ್ತಿವೆ.

ನೂತನ ವಿಮಾನ ನಿಲ್ದಾಣದಲ್ಲಿ 3050 ಮೀಟರ್ ಉದ್ದದ ರನ್‍ವೇ ಇದ್ದು, ಅದನ್ನು 4 ಸಾವಿರ ಮೀಟರ್‍ಗೆ ವಿಸ್ತರಿಸಲಾಗುವದು. ನಿಲ್ದಾಣ ನಿರ್ಮಾಣಗೊಂಡಿದ್ದರೂ, ಅದಕ್ಕೆ ಹೆಚ್ಚಿನ ಪ್ರಯಾಣಿಕರಿಗೆ ಸೇವೆ ಒದಗಿಸಲು ನಿಲ್ದಾಣ ಸಜ್ಜಾಗಿದೆ. ಗೋವರ್ - ಇಂಡಿಗೋ - ಸ್ಪ್ರೆಸ್‍ಜೆಟ್ ಸಂಸ್ಥೆಗಳು ಹಾರಾಟಕ್ಕೆ ಮುಂದೆ ಬಂದಿದ್ದು, ವಿದೇಶಿ ಸಂಸ್ಥೆಗಳೂ ಕೂಡಾ ಹಾರಾಟಕ್ಕೆ ಮುಂದೆ ಬಂದಿವೆ. ಅಬುದಾಬಿ, ದಮನ್, ದೋಹಾ, ಕುವೈಟ್ ಅಲ್ಲದೆ ದೇಶದ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಗೋವಾ, ಹುಬ್ಬಳ್ಳಿ ಹಾಗೂ ತಿರುವನಂತಪುರಕ್ಕೆ ವಿಮಾನಗಳು ಪ್ರಯಾಣಿಸಲಿವೆ.