ಗೋಣಿಕೊಪ್ಪ ವರದಿ, ನ. 29 : ಕಾಫಿ, ಕಾಳುಮೆಣಸು ಬೆಳೆ ಕೊಯ್ಲು ಸಮಯ ಸಮೀಪಿಸುತ್ತಿರುವದರಿಂದ ಕಳ್ಳರ ಕಾಟ ನಿಯಂತ್ರಣಕ್ಕೆ ಹಾಗೂ ಅಕ್ರಮ ಮದ್ಯ ಮಾರಾಟದ ವಿರುದ್ಧ ಅಬಕಾರಿ ಇಲಾಖೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯರುಗಳು ಒತ್ತಾಯಿಸಿದ ಘಟನೆ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು. ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾ. ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸದಸ್ಯರುಗಳು ಈ ಬಗ್ಗೆ ಒತ್ತಾಯಿಸಿ, ಅತಿವೃಷ್ಟಿಯಿಂದ ಬೆಳೆ ಕಳೆದು ಕೊಂಡಿರುವ ರೈತರ ಪರವಾಗಿ ಇಲಾಖೆ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆ ಅಧಿಕಾರಿ, ಇಲಾಖೆ ವಾಹನ ಗಳನ್ನು ಬದಲು ಮಾಡಲಾಗಿದೆ. ಕಾರ್ಯಾಚರಣೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಈಗಾಗಲೇ ಸಾಕಷ್ಟು ಪ್ರಕರಣ ದಾಖಲಾಗಿವೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ದಾಖಲೆಗಳಿವೆ. ವಾಹನ ಬದಲಿಸುವಂತೆ ಸಾಕಷ್ಟು ಒತ್ತಾಯವಿತ್ತು. ಅದರಂತೆ ಆಗಿದೆ, ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರುಗಳು ವಾಹನ ಮಾತ್ರವಲ್ಲ, ಕಾರ್ಯಾಚರಣೆಗೆ ತೆರಳುವ ಮುನ್ನ ಸುಳಿವು ನೀಡುವ ಇಲಾಖೆಯ ಚಾಲಕರನ್ನು ಬದಲಾಯಿಸಿ ಎಂದು ಒತ್ತಾಯಿಸಿದರು. ಆಯ್ಕೆ ನಡೆಯುತ್ತಿದೆ. ಶೀಘ್ರದಲ್ಲಿ ವಾಹನ ಚಾಲಕರು ಕೂಡ ಹೊಸದಾಗಿ ನೇಮಕವಾಗುತ್ತಾರೆ. ಗಾಂಜಾ ಪ್ರಕರಣ ಹೆಚ್ಚಾಗುತ್ತಿರುವ ದರಿಂದ ಅಂತಹ ಮಾಹಿತಿ ಇದ್ದರೆ ತಿಳಿಸುವಂತೆ ಮನವಿ ಮಾಡಿದರು.
ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಒಂದು ಕಾಳು ಮೆಣಸು ಬಳ್ಳಿ ಬೆಳೆಯದವ 8 ಕ್ವಿಂಟಾಲ್ ಮೆಣಸು ಮಾರಾಟ ಮಾಡಿದ ನಿದರ್ಶನವಿದೆ. ಇದು ತೋಟಗಳಿಂದ ಕದ್ದು ಮಾರಾಟ ಮಾಡಿದ ಮೆಣಸು ಆಗಿದೆ ಎಂದರು. ಸಾರಾಯಿ ಕುಡಿಯದವರಿಗೆ ಬರೀಸ್ ಮಾರಾಟ ಮಾಡಲಾಗುತ್ತಿದೆ ಎಂದು ಸದಸ್ಯೆ ಕಾವೇರಮ್ಮ ಆರೋಪಿಸಿದರು.
ವೀರಾಜಪೇಟೆ ತಾಲೂಕಿನಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಹೆಚ್ಚಾಗುತ್ತಿರುವದರಿಂದ ಗುತ್ತಿಗೆ ಆಧಾರದಲ್ಲಿ
(ಮೊದಲ ಪುಟದಿಂದ) ತಕ್ಷಣ ನೇಮಕಾತಿಗೆ ಅವಕಾಶವಿದೆ. ಸದಸ್ಯರುಗಳು ಎಂಬಿಬಿಎಸ್ ಪಡೆದ ವೈದ್ಯರ ಬಗ್ಗೆ ಮಾಹಿತಿ ಇದ್ದರೆ ಗಮನಕ್ಕೆ ತರುವಂತೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮನವಿ ಮಾಡಿದರು.
11 ಕೇಂದ್ರಗಳಲ್ಲಿ 3 ಕೇಂದ್ರ ಹೊರತುಪಡಿಸಿ ಉಳಿದ ಕೇಂದ್ರಗಳಲ್ಲಿ ಆಯುಷ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಶವಪರೀಕ್ಷೆ ಇಂತಹವುಗಳಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಗುತ್ತಿಗೆ ಆಧಾರದಲ್ಲಿ ಎಂಬಿಬಿಎಸ್ ವೈದ್ಯರನ್ನು ತಕ್ಷಣ ನೇಮಕ ಮಾಡಲು ಅವಕಾಶವಿದೆ. ಮಾಸಿಕವಾಗಿ ಆರಂಭದಲ್ಲಿ 45 -65 ಸಾವಿರ ಭತ್ಯೆ ಇದೆ. ಸ್ಪೆಷಲಿಸ್ಟ್‍ಗಳಿಗೆ ಮಾಸಿಕ 1,70 ಲಕ್ಷ ಭತ್ಯೆ ಇದೆ ಎಂದು ಹೇಳಿದರು.
ತಾಲೂಕಿನಲ್ಲಿ ಕುಡಿಯುವ ನೀರು ಅನುಷ್ಠಾನಕ್ಕೆ 3 ಕೋಟಿ ರಾಜ್ಯ ಸರ್ಕಾರದಿಂದ ನೇರವಾಗಿ ಬಿಡುಗಡೆಯಾಗಿದೆ. ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ತಾ. ಪಂ ಸದಸ್ಯರುಗಳು ಕುಡಿಯುವ ನೀರು ಕೇಳಿದರೆ ಸಿಗುವದಿಲ್ಲ, ಜಿ. ಪಂ ಸದಸ್ಯರು ನೀರು ಕೇಳಿದರೆ ಬೇಗ ಅನುಷ್ಠಾನ ಮಾಡಲಾಗುತ್ತಿದೆ ಎಂದು ಸದಸ್ಯೆ ಆಶಾಜೇಮ್ಸ್ ಆರೋಪಿಸಿದರು.
ಗೋಣಿಕೊಪ್ಪ ಜನೌಷಧಿ ಕೇಂದ್ರಗಳಲ್ಲಿ ರೋಗಿಗಳಿಗೆ ಬೇಕಾದ ಕಾಯಿಲೆಗಳ ಔಷಧಿ ದೊರೆಯುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ, ಖಾಸಗಿಯಾಗಿ ನಡೆಸಲಾಗುತ್ತಿದೆ. ಆದರೂ ಸ್ಥಳಿಯ ವೈದ್ಯರುಗಳು ಸೂಚಿಸುವ ಹಾಗೂ ರೋಗಿಗಳಿಗೆ ಬೇಕಾದಂತ ಔಷಧಿ ಇಟ್ಟುಕೊಳ್ಳಲು ತಿಳಿಸಲಾಗಿದೆ. ಸಧ್ಯದಲ್ಲಿಯೇ ಸಮಸ್ಯೆ ಪರಿಹಾರ ಕಾಣಲಿದೆ ಎಂದರು.
ಭೂಕುಸಿತ ಸಂದರ್ಭ ತಾಲೂಕಿನ ಮಾಯಮುಡಿ, ಕೆದಮುಳ್ಳೂರು ಹಾಗೂ ಕಾಕೋಟುಪರಂಬು ಗ್ರಾಮ ಪಂಚಾಯಿತಿಗೆ ವಿಶೇಷ ಪ್ಯಾಕೇಜ್‍ನಲ್ಲಿ ಪಡಿತರಗಳನ್ನು ಸರಬರಾಜು ಮಾಡಿದ್ದರೂ ವಿತರಣೆಯಾಗಿಲ್ಲ. ಕೂಡಲೇ ವಿತರಣೆ ಮಾಡಬೇಕು ಎಂದು ಸದಸ್ಯ ಮಾಳೇಟೀರ ಪ್ರಶಾಂತ್ ಒತ್ತಾಯಿಸಿದರು.
ಮೇಕೆ ಸಾಕಾಣಿಕೆಗೆ ಎಸ್ಟಿ, ಎಸ್ಸಿ ವಿಭಾಗದಿಂದ ಫಲಾನುಭವಿಗಳು ಬರುತ್ತಿಲ್ಲ, ಹುಡುಕಿಕೊಡಿ ಎಂದು ಪಶುವೈದ್ಯ ಇಲಾಖೆ ಅಧಿಕಾರಿ ಮನವಿ ಮಾಡಿದರು. 11 ಮೇಕೆ, 60 ಸಾವಿರ ಸಹಾಯಧನ ನೀಡಲಾಗುತ್ತದೆ. ಆದರೂ ಫಲಾನುಭವಿಗಳು ಬರುತ್ತಿಲ್ಲ ಎಂದು ಅಧಿಕಾರಿ ಹೇಳಿದರು.
ಸಭೆ ನಡವಳಿ ಪುಸ್ತಕ ಸಮಯಕ್ಕೆ ಸರಿಯಾಗಿ ತರದ ಕಾರಣ 10 ನಿಮಿಷ ತಡವಾಗಿ ಆರಂಭವಾಯಿತು. ಸದಸ್ಯರು, ಅಧ್ಯಕ್ಷರು ಇಒ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು, ಸಭೆಗೆ ನಡವಳಿ ಪುಸ್ತಕ ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಬೇಕಿತ್ತು ಎಂದರು. ಇಲ್ಲ ಸಿಬ್ಬಂದಿಗೆ ಸೂಚಿಸಿದ್ದೆ, ಮರೆತಿದ್ದಾರೆ ಎಂದು ಇಒ ಜಯಣ್ಣ ಹೇಳಿದರು. ಹುಡುಕಿ ನಂತರ ತರಲಾಯಿತು. ಸಭೆಯಲ್ಲಿ ಇಒ ಜಯಣ್ಣ, ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
- ಸುದ್ದಿಪುತ್ರ