ಕುಶಾಲನಗರ, ನ. 29: ಪಟ್ಟಣದಲ್ಲಿ ಸಮರ್ಪಕ ಸಂಚಾರಿ ವ್ಯವಸ್ಥೆ ಕೈಗೊಳ್ಳಲು ಸ್ಥಳೀಯ ಆಡಳಿತ ಹಲವು ಕ್ರಮಗಳನ್ನು ಕೈಗೊಂಡರೂ ಯೋಜನೆಗಳು ನೆನೆಗುದಿಗೆ ಬೀಳುವದರೊಂದಿಗೆ ನಾಗರಿಕರು ಪರದಾಡುವಂತಹ ಸ್ಥಿತಿ ಗೋಚರವಾಗಿದೆ.

ಕುಶಾಲನಗರದಲ್ಲಿ ಖಾಸಗಿ ಬಸ್‍ಗಳು, ಮ್ಯಾಕ್ಸಿಕ್ಯಾಬ್, ಆಟೋಗಳು ಎಲ್ಲೆಂದರಲ್ಲಿ ನಿಲುಗಡೆಗೊಳ್ಳುತ್ತಿದ್ದು, ಹೆದ್ದಾರಿಯಲ್ಲಿ ಭಾರೀ ಗಾತ್ರದ ವಾಹನ ಸಂಚಾರಕ್ಕೆ ತೊಡಕುಂಟಾಗುವದರೊಂದಿಗೆ ಪಾದಚಾರಿಗಳ ಓಡಾಟಕ್ಕೆ ಅನಾನುಕೂಲತೆ ಸೃಷ್ಟಿಯಾಗಿದೆ.

ಕುಶಾಲನಗರ ಗಣಪತಿ ದೇವಾಲಯ ಬಳಿ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಯಾಗಿದ್ದು, ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಅತೀ ಸಣ್ಣ ವೃತ್ತ ವೊಂದರಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಯಾಗಿದ್ದು, ಇದರಿಂದ ಜನರಿಗೆ ತೊಂದರೆಯೇ ಹೊರತು ಯಾವದೇ ಪ್ರಯೋಜನ ಕಂಡುಬರುತ್ತಿಲ್ಲ.

ಸಿಗ್ನಲ್ ಅಳವಡಿಕೆಯ ಸುತ್ತಲೂ ವಾಹನಗಳ ನಿಲುಗಡೆ, ತಳ್ಳುವ ಗಾಡಿ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳು ಖಾಸಗಿ, ಸಾರಿಗೆ ಬಸ್ ನಿಲ್ದಾಣಗಳು ಇರುವ ಹಿನ್ನೆಲೆ ಕೆಲವೊಮ್ಮೆ ಅಪಘಾತ ಘಟನೆಗಳು ಕೂಡ ಇಲ್ಲಿ ನಡೆಯುತ್ತಿರುವದು ಸಾಮಾನ್ಯವಾಗಿವೆ. ಗಣಪತಿ ದೇವಾಲಯ ಕಡೆಯಿಂದ ಬರುವ ರಸ್ತೆಯಲ್ಲಿ ಮತ್ತು ಬಿಎಸ್‍ಎನ್‍ಎಲ್ ಕಡೆಯಿಂದ ಬರುವ ವಾಹನ ಸವಾರರು ಹೆದ್ದಾರಿ ರಸ್ತೆಗೆ ಬರಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಾಗುತ್ತದೆ. ಸ್ಥಳೀಯ ಅಧಿಕಾರಿಗಳು ಯಾವದೇ ರೀತಿಯಲ್ಲಿ ತಲೆಕೆಡಿಸಿಕೊಂಡಂತಿಲ್ಲ.

ಇನ್ನೊಂದೆಡೆ ಕುಶಾಲನಗರ ಅಂಚೆ ಕಚೇರಿ ಮುಂಭಾಗ ಆಟೋ ನಿಲುಗಡೆಗೆ ಸಂಚಾರಿ ಪೊಲೀಸರು ಶಾಶ್ವತ ಬ್ಯಾರಿಕೇಡ್ ಅಳವಡಿಸಿ ಕೊಟ್ಟಿದ್ದರೂ ಇದನ್ನು ಬಳಸುವಲ್ಲಿ ಚಾಲಕರು ಹಿಂದೇಟು ಹಾಕಿರುವದು ಇಡೀ ವ್ಯಾಪಾರ ವಹಿವಾಟಿಗೆ ಧಕ್ಕೆಯುಂಟುಮಾಡುತ್ತಿರುವ ದೂರುಗಳು ಕೇಳಿಬಂದಿವೆ.

ಕುಶಾಲನಗರ ಪಟ್ಟಣಕ್ಕೆ ಸಂಚಾರಿ ಪೊಲೀಸ್ ವ್ಯವಸ್ಥೆ ದೊರೆತ ನಂತರ ಸಮರ್ಪಕ ವಾಹನ ಸಂಚಾರ ಉಂಟಾಗುವ ನಿರೀಕ್ಷೆ ಹೊಂದಿದ ಜನರಿಗೆ ಇದೊಂದು ರೀತಿಯ ಗಗನ ಕುಸುಮ ಎನ್ನು ವಂತಾಗಿರುವದು ದುರಂತ. ಸ್ಥಳೀಯ ಆಡಳಿತ ಮಾತ್ರ ಕುಶಾಲನಗರ ಪಟ್ಟಣದ ವಾಹನ ಸಂಚಾರ ವ್ಯವಸ್ಥೆಯ ಬಗ್ಗೆ ಕಣ್ಮುಚ್ಚಿ ಕುಳಿತ್ತಿದ್ದು, ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆಯ ಬಗ್ಗೆ ಚಿಂತನೆ ಹರಿಸಬೇಕಾಗಿದೆ.

- ಚಂದ್ರಮೋಹನ್