ಮಡಿಕೇರಿ, ನ.29 :ವಿಶ್ವ ಏಡ್ಸ್ ದಿನವನ್ನು ಡಿಸೆಂಬರ್ 1 ರಂದು ಆಚರಿಸಲಾಗುತ್ತಿದ್ದು, ‘ನಿಮ್ಮ ಹೆಚ್‍ಐವಿ ಸ್ಥಿತಿಯನ್ನು ತಿಳಿಯಿರಿ’ ಎಂಬ ಘೋಷ ವಾಕ್ಯದೊಂದಿಗೆ ಮಡಿಕೇರಿ ನಗರದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಭಾರ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30ನೇ ವರ್ಷದ ವಿಶ್ವ ಏಡ್ಸ್ ದಿನದ ಅಂಗವಾಗಿ ಪ್ರತಿಯೊಬ್ಬರು ತಮ್ಮ ಹೆಚ್‍ಐವಿ ಸ್ಥಿತಿಗತಿಯನ್ನು ತಿಳಿದುಕೊಳ್ಳುವದು ಅಗತ್ಯವೆಂಬ ದೃಷ್ಟಿಕೋನದೊಂದಿಗೆ 2020ರ ಒಳಗೆ 90:90:90 ಗುರಿಯನ್ನು ಸಾಧಿಸುವದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಶೇ.90 ರಷ್ಟು ಮಂದಿ ಹೆಚ್‍ಐವಿ ಸ್ಥಿತಿಯನ್ನು ತಿಳಿದುಕೊಳ್ಳುವದು, ಹೆಚ್‍ಐವಿ ಸೋಂಕು ಪತ್ತೆಯಾದವರಲ್ಲಿ ಶೇ.90 ರಷ್ಟು ಸೋಂಕಿತರು ಎಆರ್‍ಟಿ ಚಿಕಿತ್ಸೆÉಯನ್ನು ಪಡೆಯುವದು ಮತ್ತು ಚಿಕಿತ್ಸೆಯನ್ನು ಪಡೆಯುತ್ತಿರುವ ಶೇ.90 ಸೋಂಕಿತರಲ್ಲಿ ವೈರಾಣುವಿನ ಮಟ್ಟವನ್ನು ಕುಂದಿಸುವದು ಜಾಗೃತಿ ಅಭಿಯಾನದ ಗುರಿಯಾಗಿದೆ. ಹೆಚ್‍ಐವಿ ಸೋಂಕು ತಡೆಗಟ್ಟುವದು ಹಾಗೂ ಸೋಂಕಿನೊಂದಿಗೆ ಜೀವಿಸುತ್ತಿರುವ ಪ್ರತಿಯೊಬ್ಬರು ಆರೋಗ್ಯಕರವಾದ ಜೀವನವನ್ನು ನಡೆಸುವಂತಾಗಲು ಹೆಚ್‍ಐವಿ ಚಿಕಿತ್ಸೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಚ್‍ಐವಿ ಸ್ಥಿತಿಗತಿಯನ್ನು ತಿಳಿದುಕೊಳ್ಳುವದು ಸೂಕ್ತವೆಂದು ಡಾ. ಶಿವಕುಮಾರ್ ಸಲಹೆ ನೀಡಿದರು.

ಸೋಂಕನ್ನು ಶೀಘ್ರ ಪತ್ತೆ ಹಚ್ಚುವದರಿಂದ ರೋಗಿಗೆ ತಕ್ಷಣ ಚಿಕಿತ್ಸೆಯನ್ನು ಆರಂಭಿಸಿದಲ್ಲಿ ಆತನ ಆಯುಷ್ಯದಲ್ಲಿ ವೃದ್ಧಿಯನ್ನು ಕಾಣಬಹುದು. ಚಿಕಿತ್ಸೆ ತಡವಾದರೆ ರೋಗಿಯ ರೋಗ ನಿರೋಧಕ ಶಕ್ತಿ ಕುಂದುವದರಿಂದ ಪ್ರತಿಯೊಬ್ಬರು ಹೆಚ್‍ಐವಿ ಸ್ಥಿತಿಗತಿಯನ್ನು ಅರಿತುಕೊಳ್ಳುವದು ಅಗತ್ಯವೆಂದರು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್‍ಐವಿ ಸೋಂಕು ಪರೀಕ್ಷೆಗೆ ಅಗತ್ಯವಿರುವ ಕಿಟ್‍ಗಳು ಇದೆಯೆಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ 2009 ರಿಂದ 2018ರವರೆಗೆ ಜಿಲ್ಲಾ ಆಸ್ಪತ್ರೆಯ ಎಆರ್‍ಟಿ ಕೇಂದ್ರದಲ್ಲಿ 1707 ಹೆಚ್‍ಐವಿ ಸೋಂಕಿತರು ನೋಂದಾಯಿಸಲ್ಪಟ್ಟಿದ್ದಾರೆ ಹಾಗೂ 877 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್‍ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಮಕ್ಕಳಲ್ಲಿ 6 ವಾರದಿಂದ 18 ತಿಂಗಳ ಒಳಗಿನ ನೂರು ಮಕ್ಕಳಿಗೆ ಪರೀಕ್ಷೆಯನ್ನು ನಡೆಸಿದಾಗ ಐವರಿಗೆ ಹೆಚ್‍ಐವಿ ಸೋಂಕು ಇರುವದು ಕಂಡು ಬಂದಿದೆ. ಜಿಲ್ಲೆಯಲ್ಲಿ ಸುಮಾರು 675 ಮಹಿಳಾ ಲೈಂಗಿಕ ಕಾರ್ಯಕರ್ತೆಯರಿದ್ದು, ಸುಮಾರು 120 ಮಂದಿ ಪುರುಷ ಸಲಿಂಗ ಲೈಂಗಿಕ ಸಂಪರ್ಕ ಹೊಂದಿರುವವರು ನೋಂದಾಯಿತರಾಗಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 2018 ಅಕ್ಟೋಬರ್ ಅಂತ್ಯದವರೆಗೆ 25 ಮಂದಿ ಹೆಚ್‍ಐವಿ ಸೋಂಕಿತರು, ಸೋಮವಾರಪೆÉೀಟೆ 41, ವೀರಾಜಪೇಟೆ 61 ಇತರೆ ಜಿಲ್ಲೆಯ 21 ಹೀಗೆ ಕಳೆದ 10 ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 148 ಹೆಚ್‍ಐವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆಯೆಂದು ಡಾ. ಶಿವಕುಮಾರ್ ಮಾಹಿತಿ ನೀಡಿದರು.

ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನದ ಪ್ರಯುಕ್ತ ನಗರದ ಮುಖ್ಯ ಬೀದಿಗಳಲ್ಲಿ ಜಾಗೃತಿ ಜಾಥ ನಡೆಸಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಿರುವದಾಗಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಕೆ.ಎನ್.ಸುನಿತಾ, ಆಪ್ತ ಸಮಾಲೋಚಕರಾದ ವಿ.ಆರ್. ಅನಿತಾ, ಸರ್ವೋದಯ ಸಂಸ್ಥೆಯ ಅಧ್ಯಕ್ಷ ಎ.ಬಿ.ಚಂಗಪ್ಪ ಹಾಗೂ ಎಸ್.ವಿ. ಕಮಲ ಉಪಸ್ಥಿತರಿದ್ದರು.