*ಸಿದ್ದಾಪುರ, ನ. 29: ಪಟ್ಟಣ ವ್ಯಾಪ್ತಿ ಮತ್ತು ಬಸ್ ನಿಲ್ದಾಣದಲ್ಲಿ ಆಡು, ಕುರಿ ಸೇರಿದಂತೆ ಇತರ ಜಾನುವಾರುಗಳು ಅಲೆದಾಡುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿರುವ ಪರಿಣಾಮ ಈ ಹಿಂದೆ ಇದ್ದ ದೊಡ್ಡಿಯನ್ನು ನವೀಕರಣಗೊಳಿಸಲು ಗ್ರಾಮ ಪಂಚಾಯಿತಿ ಆಡಳಿತವು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು.

ಮಾರ್ಕೆಟ್ ನಿವಾಸಿಗಳ ಮತ್ತು ಇತರೆಡೆಯ ನಿವಾಸಿಗಳು ಸಾಕಿಕೊಂಡಿರುವ ಆಡು, ಕುರಿಗಳು ಮತ್ತು ಹಸುಗಳು ಬಸ್ ನಿಲ್ದಾಣದಲ್ಲಿ ಬೀಡುಬಿಟ್ಟಿರುವ ಪರಿಣಾಮ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಇತರ ವಾಹನ ಸಂಚಾರರಿಗೆ ಕಿರಿಕಿರಿಯುಂಟಾಗುತ್ತಿತ್ತು. ಅಪಘಾತಗಳು ಸಂಭವಿಸುವ ಅಪಾಯಗಳು ಎದುರಾಗಿದ್ದು, ಇತ್ತ ಜಾನುವಾರುಗಳು ಕೂಡ ವಾಹನಗಳಿಗೆ ಸಿಲುಕಿ ಅಂಗವೂನವಾಗುವ, ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಸೂಕ್ತ ಮುಂಜಾಗೃತಾ ಕ್ರಮಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಹಿನೆÀ್ನಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕರಡಿಗೋಡು ರಸ್ತೆಯಲ್ಲಿ ಕೆಲ ವರ್ಷಗಳಿಂದ ಬಾಗಿಲು ಹಾಕಿಕೊಂಡಿದ್ದ ಜಾನುವಾರು ದೊಡ್ಡಿಯನ್ನು ಪುನಶ್ಚೇತನಗೊಳಿಸಿ ಬೀಡಾಡಿ ಜಾನುವಾರು, ಆಡು, ಕುರಿಗಳನ್ನು ದೊಡ್ಡಿಗೆ ಹಾಕುವ ಬಗ್ಗೆ ಚರ್ಚಿಸಿ ಸರ್ವ ಸದಸ್ಯರು ನಿರ್ಣಯ ಕೈಗೊಳ್ಳಲಾಗಿದೆ.