ಮಡಿಕೇರಿ, ನ. 29: ನೆಹರು ಯುವ ಕೇಂದ್ರ ಮಡಿಕೇರಿ, ತಾಲೂಕು ಯುವ ಒಕ್ಕೂಟ ಮಡಿಕೇರಿ, ನೇತಾಜಿ ಯುವಕ ಹಾಗೂ ಯುವತಿ ಮಂಡಲದ ಸಂಯುಕ್ತ ಆಶ್ರಯಲ್ಲಿ ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ‘ನೆರೆಹೊರೆ ಯುವ ಸಂಸತ್’ ಕಾರ್ಯಕ್ರಮ ಹಾಗೂ ‘ಗ್ರಂಥಾಲಯ ದಿನ’ವನ್ನು ಆಚರಿಸಲಾಯಿತು.

ಯುವ ಸಂಸತ್ ಕಾರ್ಯಕ್ರಮದಲ್ಲಿ ‘ಪ್ರಕೃತಿ ವಿಕೋಪ-ಕಾರಣಗಳು ಮತ್ತು ಮುಂಜಾಗ್ರತೆ’ ಎಂಬ ವಿಚಾರವಾಗಿ ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಅವರು ಮಾತನಾಡಿದರು. ಈ ಬಾರಿ ಮಳೆಯೊಂದಿಗೆ ಕೆಲವು ಭಾಗದಲ್ಲಿ ಅಸಹಜ ರಸ್ತೆ ನಿರ್ಮಾಣ ದಂತಹ ಕಾಮಗಾರಿಗಳಿಂದಾಗಿ ಭೂಕುಸಿತ ಸಂಭವಿಸಿರಬಹುದು. ಜನರು ಪ್ರಕೃತಿಯ ವಿರುದ್ಧ ನಡೆದರೆ ಇಂತಹ ಅನಾಹುತಗಳು ಎದುರಾಗುವದು ಸಹಜವಾಗಿದ್ದು, ಈ ದಿಸೆಯಲ್ಲಿ ಚಿಂತಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆಯ ಶಿಕ್ಷಕಿ ಜಬ್ಬಂಡ ಸುಮನ್ ಪೂವಯ್ಯ ಅವರು ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯದಲ್ಲಿರುವ ವಿಷಯಕಷ್ಟೇ ಗಮನ ಕೇಂದ್ರಿಕೃತವಾಗುತ್ತಿದ್ದು, ಜೀವನವನ್ನು ರೂಪಿಸುವ ನಿರ್ಧಿಷ್ಟ ಗುರಿಯಿರುವ ಶಿಕ್ಷಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ನೆಹರು ಯುವ ಕೇಂದ್ರದ ಸಹಾಯಕ ಲೆಕ್ಕಾಧಿಕಾರಿ ಬಿ.ಬಿ. ಮಹೇಶ್ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿದ್ದು, ಸಂಸ್ಕಾರಯುತ ಯುವ ಜನಾಂಗ ಈ ದಿಸೆಯಲ್ಲಿ ಚಿಂತನೆ ನಡೆಸಿ ಮೌಲ್ಯಾಧಾರಿತ ಸಮಾಜ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಬೇಕಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿಯ ವಿಷಯ ನಿರ್ವಾಹಕ ಪ್ರಶಾಂತ್ ಜಾರ್ಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ‘ಸಕಾಲ’ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಒದಗುವ ವಿವಿಧ ಸೇವೆಗಳ ವಿವರವನ್ನು ತಿಳಿಸಿದರು. ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಉಪಸ್ಥಿತರಿದ್ದರು.

ಯುವಕ ಮಂಡಲದ ಅಧ್ಯಕ್ಷ ಬಿ.ಬಿ. ದಿವೇಶ ರೈ ಸ್ವಾಗತಿಸಿದರು. ಸ್ಪರ್ಧಾ ವಿಜೇತರ ಪಟ್ಟಿಯನ್ನು ಉಪಾಧ್ಯಕ್ಷ ಕೆ.ಕೆ. ಗಣೇಶ್ ಓದಿದರು. ಮಾಜಿ ಅಧ್ಯಕ್ಷ ಎಂ.ಎ. ಮಹಮ್ಮದ್ ರಫೀಕ್ ಗ್ರಂಥಾಲಯಕ್ಕೆ ವಿವಿಧ ನಿಯತಕಾಲಿಕೆಗಳನ್ನು ನೀಡುತ್ತಿರುವ ದಾನಿಗಳ ಹೆಸರನ್ನು ತಿಳಿಸಿದರು. ಯುವತಿ ಮಂಡಳಿ ಅಧ್ಯಕ್ಷೆ ಮಂಜುಳಾ ಆನಂದ್ ವಂದಿಸಿದರು. ಕಾರ್ಯಕ್ರಮವನ್ನು ಗಿರೀಶ್ ತಾಳತ್‍ಮನೆ ನಿರೂಪಿಸಿದರು.

ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರಕಲೆ, ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ, ಕಾಲೇಜು ವಿದ್ಯಾರ್ಥಿ ಹಾಗೂ ಪದಾಧಿಕಾರಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.