ಮಡಿಕೇರಿ, ನ. 29: ನಗರದ ಏಲಕ್ಕಿ ಸೊಸೈಟಿ ಕಟ್ಟಡದ ಹೊಟೇಲ್ ಹಾಗೂ ಪೊಲೀಸ್ ಠಾಣೆ ಬಳಿಯ ಹೊಟೇಲ್‍ವೊಂದು ಸೇರಿದಂತೆ ಪಕ್ಕದ ಕಲ್ಯಾಣ ಮಂಟಪಗಳ ಗಲೀಜನ್ನು ಶ್ರೀ ಓಂಕಾರೇಶ್ವರ ದೇವಾಲಯ ಹಿಂಭಾಗದಲ್ಲಿ ಹರಿಯಬಿಟ್ಟಿರುವ ಬಗ್ಗೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ರಾಜೀವ್ ಗಾಂಧಿ ಗ್ರಾಮೀಣ ಯೋಜನೆಯ ಸಂಯೋಜಕ ತೆನ್ನಿರ ಮೈನಾ ಈ ಬಗ್ಗೆ ನಗರಸಭಾ ಅಧ್ಯಕ್ಷರ ಗಮನ ಸೆಳೆದ ಮೇರೆಗೆ, ಇಂದು ಅವರು ಖುದ್ದು ಪರಿಶೀಲಿಸಿ ಸಂಬಂಧಿಸಿದವರಿಗೆ ನೋಟೀಸ್ ಜಾರಿಗೊಳಿಸುವಂತೆ ನಗರಸಭಾ ಸಿಬ್ಬಂದಿಗೆ ಸೂಚಿಸಿದರು. ಅಲ್ಲದೆ ಗಲೀಜು ರಸ್ತೆಯಲ್ಲಿ ಹರಿಯಬಿಡದಂತೆ ಎಚ್ಚರಿಕೆ ನೀಡಿದರು.

ಇನ್ನೊಂದೆಡೆ ಈ ರಸ್ತೆ ತೀರಾ ಹದಗೆಟ್ಟು ಹಳ್ಳಕೊಳ್ಳದಂತೆ ಭಾಸವಾಗುತ್ತಿರುವ ಅಪಾಯವನ್ನು ಗಮನಿಸಿದ ಅಧ್ಯಕ್ಷರು, ತುರ್ತು ದುರಸ್ಥಿಗೊಳಿಸುವ ಭರವಸೆ ನೀಡಿದರು. ನಿತ್ಯ ದೇವಾಲಯಕ್ಕೆ ಬರುವ ಭಕ್ತರು, ಅಯ್ಯಪ್ಪ ವ್ರತದಾರಿಗಳು ಸಾರ್ವಜನಿಕರು, ದುರ್ನಾತದ ನಡುವೆ ಹದಗೆಟ್ಟಿರುವ ರಸ್ತೆಯಲ್ಲಿ ತೊಂದರೆ ಅನುಭವಿಸಬೇಕಿದೆ ಎಂದು ಅಕ್ಕಪಕ್ಕ ನಿವಾಸಿಗಳು ಈ ವೇಳೆ ಗಮನ ಸೆಳೆದರು. ಈ ಬಗ್ಗೆ ತುರ್ತು ಕ್ರಮವಹಿಸಲಾಗುವದು ಎಂದು ಕಾವೇರಮ್ಮ ಭರವಸೆ ನೀಡಿದರಲ್ಲದೆ, ವರ್ತಕರ ಸಹಿತ ನಿವಾಸಿಗಳು ಕೂಡ ಕಸ ಇತ್ಯಾದಿ ಗಲೀಜನ್ನು ಎಲ್ಲೆಂದರಲ್ಲಿ ಎಸೆಯದಂತೆ ತಿಳಿಹೇಳಿದರು. ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡುವಲ್ಲಿ ಕೈಜೋಡಿಸುವಂತೆ ಸಲಹೆಯಿತ್ತರು.