ಸೋಮವಾರಪೇಟೆ,ನ.29: ಪಕ್ಕದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಅರಕಲಗೂಡು, ಮಲ್ಲಿಪಟ್ಟಣ ಮಾರ್ಗವಾಗಿ ಜಿಲ್ಲೆಯ ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ, ಮಾಕುಟ್ಟ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕಾರ್ಯಯೋಜನೆಗಳು ತಯಾರಾಗುತ್ತಿದ್ದು, ಈಗಿರುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದೆ.

ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಜಿಲ್ಲೆಯಲ್ಲಿ ಸುಮಾರು 120 ಕಿ.ಮೀ. ಉದ್ದ ಹೊಂದಿದ್ದು, ಪ್ರತಿಷ್ಠಿತ ಎಲ್ ಅಂಡ್ ಟಿ ಕಂಪೆನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಸ್ತೆಯನ್ನು ಲೇಡಾರ್ ತಂತ್ರಜ್ಞಾನದಡಿ ಸರ್ವೆ ಕಾರ್ಯ ನಡೆಸುತ್ತಿದ್ದಾರೆ.

ಸೋಮವಾರಪೇಟೆ ವ್ಯಾಪ್ತಿಯಲ್ಲಿ ಈಗಾಗಲೇ ಇರುವ ರಾಜ್ಯ ಹೆದ್ದಾರಿಯ ಉದ್ದ, ಅಗಲವನ್ನು ಅಳೆದಿರುವ ಸಿಬ್ಬಂದಿಗಳು ನೂತನ ಹೆದ್ದಾರಿ ನಿರ್ಮಾಣಕ್ಕೆ ಗುರುತು ಮಾಡುವ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವ ಖಾಸಗಿ ವಾಹನಗಳು, ಸರ್ಕಾರಿ ಸೇರಿದಂತೆ ಖಾಸಗಿ ಬಸ್‍ಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಕೊಡಗಿನ ಶನಿವಾರಸಂತೆಯಿಂದ ಸೋಮವಾರಪೇಟೆ ಮಾರ್ಗವಾಗಿ, ಮಡಿಕೇರಿ, ವೀರಾಜಪೇಟೆ, ಮಾಕುಟ್ಟ ಸಂಪರ್ಕಿಸುವ ರಾಜ್ಯ ಹೆದ್ದಾರಿ-27ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವೀರಾಜಪೇಟೆ-ಬೈಂದೂರು ರಸ್ತೆ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ಎಲ್ ಅಂಟ್ ಟಿ ಕಂಪೆನಿಯಿಂದ ಈಗಾಗಲೇ ಸರ್ವೆ ಕಾರ್ಯ ಭರದಿಂದ ಸಾಗುತ್ತಿದೆ. ಸುಮಾರು 7 ರಿಂದ 9 ಮೀಟರ್ ಅಗಲದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದ್ದು, ಕೇಂದ್ರ ಸರ್ಕಾರವೇ ಅನುದಾನ ಒದಗಿಸಲಿದೆ. ಸದ್ಯಕ್ಕೆ ಉದ್ದೇಶಿತ ರಸ್ತೆಯ ಉದ್ದ, ಪ್ರಸ್ತುತ ಇರುವ ರಸ್ತೆಯ ಸ್ಥಿತಿಗತಿ, ಯೋಜನೆಗೆ ಬೇಕಾಗಿರುವ ರಸ್ತೆಯ ವಿಸ್ತೀರ್ಣ, ಸೇತುವೆಗಳು, ಕಲ್ವರ್ಟ್‍ಗಳು, ಬೈಪಾಸ್ ರಸ್ತೆ, ಭಾರೀ ತಿರುವಿನಲ್ಲಿ ರಸ್ತೆಯನ್ನು ನೇರಮಾಡಲು ಬೇಕಾಗುವ ಭೂಮಿ, ರಸ್ತೆಯ ಅಗಲೀಕರಣದಿಂದ ನೆಲೆ ಕಳೆದುಕೊಳ್ಳುವ ಮನೆ, ಅಂಗಡಿ ಮುಂಗಟ್ಟುಗಳು, ಭೂಮಿಗೆ ನೀಡಬೇಕಾದ ಪರಿಹಾರ, ಅವಶ್ಯಕವಿರುವ ಭೂಮಿ ಇತ್ಯಾದಿಗಳನ್ನು ಸರ್ವೆ ಮಾಡಲಾಗುತ್ತಿದೆ.

ಮುಂದಿನ ಮೂರು ತಿಂಗಳ ಒಳಗೆ ಸಂಪೂರ್ಣ ಸರ್ವೆ ಕಾರ್ಯ ಮುಗಿಯಲಿದ್ದು, ನಂತರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.