ಮಡಿಕೇರಿ, ನ. 29: ದಿವ್ಯಾಂಗರು, ವಿಶೇಷ ಅಗತ್ಯತೆಯುಳ್ಳ ಮಕ್ಕಳು ಎಂದೆಲ್ಲಾ ಕರೆಯಲ್ಪಡುವ ಮುಗ್ಧ ಕುಡಿಗಳು ಇಂದು ಗಾಂಧಿ ಮೈದಾನದಲ್ಲಿ ತಮಗಾಗಿಯೇ ಆಯೋಜನೆ ಗೊಂಡಿದ್ದ ಕ್ರೀಡಾಕೂಟದಲ್ಲಿ ಮಿಂದೆದ್ದವು.

ಅಂಗ ವೈಕಲ್ಯತೆ, ಬುದ್ಧಿ ಮಾಂದ್ಯತೆಯಿಂದಾಗಿ ಸಮಾಜದಲ್ಲಿ ವಿಶೇಷವಾಗಿ ಪರಿಗಣಿಸಲ್ಪಡುವ ವಿಶೇಷ ಚೇತನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳ ಉತ್ಸುಕತೆಗೆ ಯಾವ ಕೊರತೆಯು ಇರಲಿಲ್ಲ. ಸಾಮಾನ್ಯ ಮಕ್ಕಳಂತೆಯೇ ಈ ಮಕ್ಕಳು ಕೂಡ ಸ್ಪರ್ಧಾ ಮನೋಭಾವದೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಕಾಳು ಹೆಕ್ಕುವದು, ಓಟ, ಭಾರದ ಗುಂಡು ಎಸೆತ, ಜನಪದ ಗೀತೆ ಮತ್ತಿತರ ಸ್ಪರ್ಧೆಗಳು ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ನಡೆಯಿತು. ಪೋಷಕರು ತಮ್ಮ ತಮ್ಮ ಮಕ್ಕಳನ್ನು ಹುರಿದುಂಬಿಸುವದರೊಂದಿಗೆ ಆಟಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದರು.

ಶಿಳ್ಳೆ ಮೂಲಕ ಉದ್ಘಾಟನೆ

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್, ಕೊಡಗು ವಿದ್ಯಾಲಯ ಆಪರ್ಚುನಿಟಿ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಾಡಾಗಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದ ಆಟೋಟ ಸ್ಪರ್ಧೆಯನ್ನು ಜ್ಞಾನೇಶ್ ಎಂಬ ಯುವಕನಿಂದ ಶಿಳ್ಳೆ ಹೊಡಿಸುವ ಮೂಲಕ ಉದ್ಘಾಟಿಸಲಾ ಯಿತು. ಉದ್ಘಾಟನಾ ಸಮಾರಂಭ ದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅಪರ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ದಿವ್ಯಾಂಗರನ್ನು ನಿರ್ಲಕ್ಷಿಸದೆ ಅವರನ್ನು ಕೂಡ ನಮ್ಮವ ರಂತೆಯೆ ಕಾಣಬೇಕು ಎಂದರು.

ಹಿರಿಯ ನಾಗರಿಕರು ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಪಟ್ಟರೆ, ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಗೆ ದೂರು ನೀಡಲು ಅವಕಾಶವಿದ್ದು, ನ್ಯಾಯಪಡೆ ಯಬಹುದಾಗಿದೆ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಮಾತನಾಡಿ, ವಿಶೇಷಚೇತನರ ಬಗ್ಗೆ ಕನಿಕರ ತೋರುವದಕ್ಕಿಂತ ಎಲ್ಲರಂತೆ ಅವರು ಮುಖ್ಯವಾಹಿನಿಗೆ ಬರಲು ಸಹಕಾರ ನೀಡುವದು ಉತ್ತಮ ಎಂದು ಸಲಹೆಯಿತ್ತರು.

ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ವಿಕಲಚೇತನರಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕೆಂದರು. ವಿಶೇಷಚೇತನ ಇಲಾಖಾಧಿಕಾರಿ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಗು ವಿದ್ಯಾಲಯ ಆಪರ್ಚುನಿಟಿ ಶಾಲೆಯ ಪ್ರಾಂಶುಪಾಲ ವೀಣಾ ನಾರಾಯಣ, ವಿವೇಕಾನಂದ ಯೂತ್ ಮೂವ್ ಮೆಂಟ್‍ನ ಕಾರ್ಯನಿರ್ವಾಹಕರಾದ ಅಂಕಾಚಾರಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೀತಮ್ಮ ಮತ್ತು ನಳಿನಿ ಪ್ರಾರ್ಥಿಸಿ, ಕೊಡಗು ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷ ಮಹೇಶ್ವರ ನಿರೂಪಿಸಿದರು. ಭವಾನಿ ಸ್ವಾಗತಿಸಿ, ಶಿಲ್ಪ ವಂದಿಸಿದರು.