ಸೋಮವಾರಪೇಟೆ, ನ. 29: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣ ಮಾಡಿರುವ ಸ್ಮಾರ್ಟ್ ಕ್ಲಾಸ್‍ನ್ನು, ಶಾಲೆಯ ಹಳೆಯ ವಿದ್ಯಾರ್ಥಿ ಸಿ.ಕೆ. ರಾಘವ ಉದ್ಘಾಟಿಸಿದರು.
ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗೆ ದಾನಿಗಳು ಇನ್ನೂ ಹೆಚ್ಚಾಗಿ ಕೊಡುಗೆ ನೀಡಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವದರೊಂದಿಗೆ ಶಾಲೆಗಳ ಉಳಿವು ಸಾಧ್ಯ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಸದಸ್ಯರಾದ ತಂಗಮ್ಮ ಅವರು ಸ್ಮಾರ್ಟ್‍ಕ್ಲಾಸ್ ಕೊಠಡಿಗೆ ತಮ್ಮ ಸದಸ್ಯರ ನಿಧಿಯಿಂದ ರೂ. 1 ಲಕ್ಷ, ರೋಟರಿ ಸಂಸ್ಥೆ ರೂ. 10 ಸಾವಿರ, ಪಟ್ಟಣ ಪಂಚಾಯಿತಿ ರೂ. 5 ಸಾವಿರ, ಚೌಡ್ಲು ಗ್ರಾಮ ಪಂಚಾಯಿತಿಯಿಂದ ರೂ. 5 ಸಾವಿರ, ಭಾರತಿ ಟ್ರೇಡರ್ಸ್ ರೂ. 5 ಸಾವಿರ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಎಂ. ವಿಜಯ ರೂ. 5 ಸಾವಿರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಧನ ಸಹಾಯ ಮಾಡಿದ್ದಾರೆ ಎಂದರು.
ಮೀನುಗಾರಿಕಾ ಇಲಾಖೆಯಿಂದ ಕೊಡಮಾಡಿರುವ ಅಕ್ವೇರಿಯಮ್‍ನ್ನು ಇದೇ ಸಂದರ್ಭ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಸಿ.ಎಸ್. ಸುರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜೇತ್, ಶಾಲಾ ಶಿಕ್ಷಕರಾದ ರಮೇಶ್, ಚಂದ್ರಕಲಾ, ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.