ಕೂಡಿಗೆ, ನ. 29: ಇತ್ತೀಚೆಗೆ ಸೈನಿಕ ಶಾಲೆಯಲ್ಲಿ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಅಥ್ಲಿಟ್ ಪಟು ಮತ್ತು ಮೈಸೂರಿನ ಕೇಂದ್ರ ಅಬಕಾರಿ ಮತ್ತು ತೆರಿಗೆ ಇಲಾಖೆಯ ಆಯುಕ್ತೆ ರೀನಾ ಜಾರ್ಜ್ ಆಗಮಿಸಿದ್ದರು. ಪ್ರಸ್ತುತ ಸ್ಪರ್ಧೆಯಲ್ಲಿ ಎ,ಬಿ,ಸಿ,ಡಿ ಮತ್ತು ಇ ಎಂಬ ಐದು ವಿಭಾಗಗಳಿದ್ದವು.
‘ಎ’ ವಿಭಾಗದಲ್ಲಿ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿದ್ದರೆ, ‘ಬಿ’ ವಿಭಾಗದಲ್ಲಿ ಹತ್ತು ಮತ್ತು ಹನ್ನೊಂದನೇ ತರಗತಿಯ ವಿದ್ಯಾರ್ಥಿಗಳು, ‘ಸಿ’ ವಿಭಾಗದಲ್ಲಿ ಎಂಟು ಮತ್ತು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು, ‘ಡಿ’ ವಿಭಾಗದಲ್ಲಿ ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳು ಹಾಗೂ ‘ಇ’ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ‘ಎ’ ವಿಭಾಗಕ್ಕೆ 11.5 ಕಿ.ಮೀ., ‘ಬಿ’ ವಿಭಾಗಕ್ಕೆ 10 ಕಿ.ಮೀ., ‘ಸಿ’ ವಿಭಾಗಕ್ಕೆ 7 ಕಿ.ಮೀ., ‘ಡಿ’ ವಿಭಾಗಕ್ಕೆ 4 ಕಿ.ಮೀ. ಹಾಗೂ ‘ಇ’ ವಿಭಾಗಕ್ಕೆ 1.5 ಕಿ.ಮೀ. ದೂರವನ್ನು ನಿಗದಿಪಡಿಸಲಾಗಿತ್ತು. ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ನಿಶಾನೆ ನೀಡಿದರು. ಸ್ಪರ್ಧೆಯಲ್ಲಿ ‘ಎ’ ವಿಭಾಗದಿಂದ ಕೆಡೆಟ್ ಬಸವರಾಜ್ ಹುಗ್ಗೆನ್ನವರ್ ಪ್ರಥಮ, ಕೆಡೆಟ್ ರಾಹುಲ್ ಕುಮಾರ್ ದ್ವಿತೀಯ ಸ್ಥಾನವನ್ನು ಪಡೆದರೆ, ಕೆಡೆಟ್ ಆಕಾಶ್ ಬಿ.ಜೆ. ತೃತೀಯ ಸ್ಥಾನ ಪಡೆದರು.
‘ಬಿ’ ವಿಭಾಗದಲ್ಲಿ ಕೆಡೆಟ್ ಧೀಮಂತ್ ಪ್ರಥಮ, ಕೆಡೆಟ್ ಅರುಣ್ ಕುಮಾರ್ ದ್ವಿತೀಯ ಮತ್ತು ಕೆಡೆಟ್ ಸುನೀಲ್ ಎಂ. ತೃತೀಯ ಸ್ಥಾನ ಪಡೆದರು.
‘ಸಿ’ ವಿಭಾಗದಲ್ಲಿ ಕೆಡೆಟ್ ಕೆಡೆಟ್ ರಾಮ್ ಕುಮಾರ್ ಪ್ರಥಮ ಸ್ಥಾನ, ಕೆಡೆಟ್ ಶರಣಯ್ಯ ದ್ವಿತೀಯ, ಕೆಡೆಟ್ ಮಡಿವಾಳಯ್ಯ ತೃತೀಯ ಸ್ಥಾನ ಪಡೆದರು.
‘ಡಿ’ ವಿಭಾಗದಲ್ಲಿ ಏಳನೇ ತರಗತಿಯ ಕೆಡೆಟ್ ಧ್ರುವ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಕೆಡೆಟ್ ಪ್ರಜ್ವಲ್ ಮತ್ತು ತೃತೀಯ ಸ್ಥಾನವನ್ನು ಕೆಡೆಟ್ ಶ್ರೀಶೈಲ್ ಪಡೆದರು.
‘ಇ’ ವಿಭಾಗದಲ್ಲಿ ಕೆಡೆಟ್ ಅಂಕಿತ ಕುಮಾರಿ ಪ್ರಥಮ, ಕೆಡೆಟ್ ಮಾನ್ಯ ಜಿ.ಎಂ. ದ್ವಿತೀಯ ಮತ್ತು ಕೆಡೆಟ್ ಶ್ರಾವ್ಯ ತೃತೀಯ ಸ್ಥಾನ ಪಡೆದರು.
ಶಾಲೆಯ ಸುಬ್ರತೋ ನಿಲಯವು ಗುಡ್ಡಗಾಡು ಓಟ ಸ್ಪರ್ಧೆಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಕಾರ್ಯಪ್ಪ ನಿಲಯವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮುಖ್ಯ ಅತಿಥಿಗಳಾಗಿದ್ದ ರೀನಾ ಜಾರ್ಜ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಿದರು.