ಸುಂಟಿಕೊಪ್ಪ, ನ. 30: ಒಂದೆಡೆ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆಂದು ಬೈಕ್‍ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬರು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದರೆ, ಇನ್ನೊಂದೆಡೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಆರೋಗ್ಯ ವಿಚಾರಿಸಿಕೊಂಡು ಹಿಂತಿರುಗುತ್ತಿದ್ದ ಕುಟುಂಬವೊಂದರ ಮಹಿಳೆಯೊಬ್ಬರು ಈ ಅಪಘಾತದಲ್ಲಿ ಕಾಲು ಮುರಿದುಕೊಂಡು ಹಾಗೂ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಮಡಿಕೇರಿ ನಗರಸಭೆಯ ಟ್ರ್ಯಾಕ್ಟರ್ ಚಾಲಕ ಮೂಲತಃ ಕೇರಳಪುರ ಸಮೀಪದ ಹೊನ್ನೇನಳ್ಳಿಯ ನಿವಾಸಿಯಾಗಿದ್ದ ಚಂದ್ರು (50) ಎಂಬವರೇ ಬೈಕ್ ಚಲಾಯಿಸಿ ಧಾರುಣವಾಗಿ ಸಾವನ್ನಪ್ಪಿದವರಾಗಿದ್ದಾರೆ. ಬೈಕ್ ಅಪ್ಪಳಿಸಿದ ರಭಸಕ್ಕೆ ಸಿಲುಕಿದ ರಿಕ್ಷಾ ಚಾಲಕ ಕುಶಾಲನಗರ ನಿವಾಸಿ ಅಸ್ಕರ್ (27) ಅವರ ಪತ್ನಿ ಮುನ್ಸೀರಾ (24) ಅವರ ಬಲಗಾಲು ಮುರಿದಿದ್ದು, ಅಸ್ಕರ್ ಹಾಗೂ ಅವರ ಬಾವಮೈದುನ ಆಸಿಕ್ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

(ಮೊದಲ ಪುಟದಿಂದ) ಸಂಬಂಧಿಯೋರ್ವರ ಅಂತ್ಯ ಸಂಸ್ಕಾರಕ್ಕೆಂದು ಚಂದ್ರು ಕೆ.ಎ. 12-ಕ್ಯೂ 4218 ಬೈಕ್‍ನಲ್ಲಿ ಕುಶಾಲನಗರಕ್ಕೆ ಬಂದಿದ್ದಾರೆ. ಶವ ಸಂಸ್ಕಾರದ ಬಳಿಕ ಚಂದ್ರು ರಾತ್ರಿ 10 ಗಂಟೆಯ ಸಮಯದಲ್ಲಿ ಕುಶಾಲನಗರದಿಂದ ಮಡಿಕೇರಿಗೆ ಹೊರಟಿದ್ದಾರೆ. ಮಾರ್ಗ ಮಧ್ಯದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ರಥಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಭಯಭೀತರಾದ ಚಂದ್ರು ವೇಗದಲ್ಲಿ ಬಸವನಹಳ್ಳಿ ತಲಪಿದ್ದಾರೆ. ಇದೇ ಸಮಯದಲ್ಲಿ ಆಸ್ಪತ್ರೆ ಯೊಂದರಲ್ಲಿ ದಾಖಲಾಗಿದ್ದ ಸಂಬಂಧಿಯೊಬ್ಬರ ಆರೋಗ್ಯ ವಿಚಾರಿಸಿಕೊಂಡು ಅಸ್ಕರ್, ಪತ್ನಿ ಮುನ್ಸಿರಾ, ಇಬ್ಬರು ಪುಟ್ಟ ಮಕ್ಕಳು ಹಾಗೂ ಬಾವಮೈದ ಆಶಿಕ್ ಅವರೊಂದಿಗೆ ಕೆ.ಎ.12ಎ 4622 ಆಟೋ ರಿಕ್ಷಾದಲ್ಲಿ ಸುಂಟಿಕೊಪ್ಪ ಕಡೆಯಿಂದ ಕುಶಾಲನಗರದತ್ತ ಬರುತ್ತಿದ್ದಾಗ ಆನೆಕಾಡಿನ ಬ್ರೈಟ್ ಹೊಟೇಲ್ ಪಕ್ಕದಲ್ಲಿ ಬೈಕ್ ರಿಕ್ಷಾಕ್ಕೆ ಅಪ್ಪಳಿಸಿದೆ. ಇದರಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಚಂದ್ರು ಚಿಂತಾಜನಕರಾದರೆ, ಆಟೋ ಚಾಲಕ ಅಸ್ಕರ್ ಅವರ ಪತ್ನಿ ಮುನ್ಸೀರಾ (24) ಅವರ ಬಲಗಾಲು ಮುರಿದು ತಲೆಗೆ ತೀವ್ರವಾಗಿ ಗಾಯಗೊಂಡು ಚಿಂತಾಜನಕರಾದರು. ಅಸ್ಕರ್ ಮತ್ತು ಆಶಿಕ್ ಗಂಭೀರ ಗಾಯಕ್ಕೊಳಗಾಗ ಬೇಕಾಯಿತು. ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದ ರಾದರೂ ಮಾರ್ಗಮಧ್ಯದಲ್ಲಿ ಚಂದ್ರು ಕೊನೆಯುಸಿರು ಎಳೆದಿದ್ದಾರೆ. ಅಪಘಾತದಲ್ಲಿ ಕಾಲು ಕಳೆದುಕೊಂಡು ಪ್ರಜ್ಞೆ ತಪ್ಪಿರುವ ಮುನ್ಸೀರಾ ಹಾಗೂ ಇತರೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿದ್ದ ಅಸ್ಕರ್ ಅವರ ಒಂದು ವರ್ಷದ ಮಗು ಹಾಗೂ 4 ವರ್ಷದ ಇನ್ನೊಂದು ಮಗು ಸಣ್ಣಪುಟ್ಟ ಗಾಯಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವರದಿ: ಕ್ಯೂಟ್ ಕೂರ್ಗ್ ನ್ಯೂಸ್, ಚಿತ್ರ : ಟಿ.ಜಿ. ಸತೀಶ್,