ಕುಶಾಲನಗರ, ನ. 30: ಕುಶಾಲನಗರ ಶ್ರೀ ಗಣಪತಿ ದೇವಾಲಯ ರಥೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಕಲಾ ತಂಡಗಳ ಮೇಳ ಪಟ್ಟಣದಲ್ಲಿ ಮೆರವಣಿಗೆ ತೆರಳುವ ಮೂಲಕ ಮಡಿಕೇರಿ ದಸರಾವನ್ನು ನೆನಪಿಸುವ ಮಾದರಿಯಲ್ಲಿ ಕಂಡುಬಂತು. 20ಕ್ಕೂ ಅಧಿಕ ಕಲಾ ತಂಡಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗುವದರೊಂದಿಗೆ ಸಾವಿರಾರು ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಕುಶಾಲನಗರ ಗಣಪತಿ ದೇವಸ್ಥಾನ ಸೇವಾ ಸಮಿತಿಯ ನೇತೃತ್ವದಲ್ಲಿ ತೆಪ್ಪೋತ್ಸವ ಅಂಗವಾಗಿ ಜಾತ್ರೋತ್ಸವ ಸಾಂಸ್ಕøತಿಕ ಸಮಿತಿಯ ಮೂಲಕ ಈ ಬಾರಿ ವಿಶೇಷವಾಗಿ ಆಯೋಜಿಸುವ ಮೂಲಕ ಎಲ್ಲರ ಆಕರ್ಷಣೆಗೆ ಪಾತ್ರವಾಯಿತು.

ಬೈಚನಹಳ್ಳಿಯ ಮಾರಿಯಮ್ಮ ದೇವಾಲಯದಿಂದ ಚಾಲನೆಗೊಂಡ ಸಾಂಸ್ಕøತಿಕ ದಿಬ್ಬಣದಲ್ಲಿ ಕೀಲುಕುದುರೆ, ಡೊಳ್ಳುಕುಣಿತ, ನಂದಿಧ್ವಜ, ವೀರಗಾಸೆ, ಸುಗ್ಗಿಕುಣಿತ, ಪೂಜಾ ಕುಣಿತ, ಕಂಸಾಳೆ, ಮಹಿಳಾ ಕೋಲಾಟ, ಕೊಡವ ವಾಲಗ, ನಗಾರಿ, ಸೋಮನ ಕುಣಿತ, ಸುಗ್ಗಿ ಕುಣಿತ, ಗೊಂಬೆ ಕುಣಿತ, ಪಟ ಕುಣಿತ, ನಾಸಿಕ್ ಡ್ರಮ್ಸ್, ಚಿಟ್ಟೆಮೇಳ, ಗೊರವರ ಕುಣಿತ, ಅರಮನೆ ಬ್ಯಾಂಡ್, ಹುಲಿವೇಷ, ಟಿಬೇಟಿಯನ್ ನೃತ್ಯಗಳು ಸಾಲುಸಾಲಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದವು. ಮಾರಿಯಮ್ಮ ದೇವಾಲಯದ ಬಳಿ ಚಾಲನೆ ಸಂದರ್ಭ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್ 98ನೇ ಗೋಪ್ರದರ್ಶನ ಮತ್ತು ಜಾತ್ರೆ ಅಂಗವಾಗಿ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಊರಿನ ಎಲ್ಲಾ ದೇವಾಲಯಗಳ ಸಮಿತಿಯ ಸಹಕಾರದೊಂದಿಗೆ ವಿಜೃಂಭಣೆಯಿಂದ ಸಾಂಸ್ಕøತಿಕ ದಿಬ್ಬಣ ಕಾರ್ಯಕ್ರಮ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು. ಈ ಬಾರಿ ವಿಶೇಷವಾಗಿ ಡಿಸೆಂಬರ್ 5 ರಿಂದ 3 ದಿನಗಳ ಕಾಲ ಗೋಪ್ರದರ್ಶನ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾದ ವಿ.ಪಿ.ಶಶಿಧರ್ ಮಾತನಾಡಿ, ನಗರೀಕರಣದ ಪ್ರಭಾವ ಕುಶಾಲನಗರದ ಮೇಲೂ ಪರಿಣಾಮ ಬೀರುತ್ತಿದ್ದು ಕುಶಾಲನಗರ ಜಾತ್ರೋತ್ಸವದ ಮೂಲಕ ಸಾಂಸ್ಕøತಿಕ, ಕ್ರೀಡಾ ಹಾಗೂ ವಸ್ತುಪ್ರದರ್ಶನ ಗೋಪ್ರದರ್ಶನ ಮಾರಾಟ ಮತ್ತು ನಗರದ ಅಲಂಕಾರದೊಂದಿಗೆ ಕಲಾ ತಂಡಗಳ ಮೂಲಕ ಭವ್ಯ ಐತಿಹಾಸಿಕ ಪರಂಪರೆಗೆ ಮತ್ತೆ ಮೆರುಗನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರದ ವಿವಿಧ ದೇವಾಲಯಗಳ ಆಡಳಿತ ಮಂಡಳಿ, ಉದ್ಯಮಿಗಳು, ವಿವಿಧ ಸಮುದಾಯದ ಸಮಾಜಗಳು ಸೇರಿದಂತೆ ಇಂಡೊ ಟಿಬೇಟಿಯನ್ ಸೊಸೈಟಿ ಮೂಲಕ ಪ್ರಾಯೋಜಿಸಿದ ಕಲಾತಂಡಗಳು ಮೆರವಣಿಗೆಯಲ್ಲಿ ಕಂಡುಬಂದವು. ಕುಶಾಲನಗರ ಮಹಿಳಾ ಭಜನಾ ಮಂಡಳಿ ಸದಸ್ಯರ ತಂಡ ಕೋಲಾಟದಲ್ಲಿ ಪಾಲ್ಗೊಂಡಿತ್ತು.

ಈ ಸಂದರ್ಭ ದೇವಾಲಯ ಸಮಿತಿ ಹಾಗೂ ಉಪಸಮಿತಿಗಳ ಪ್ರಮುಖರಾದ ಅಮೃತ್‍ರಾಜ್, ಎಂ.ಕೆ.ದಿನೇಶ್, ಜಿ.ಎಲ್. ನಾಗರಾಜ್, ಕುಶಾಲನಗರದ ವಿವಿಧ ದೇವಾಲಯ ಸಮಿತಿ ಪ್ರಮುಖರು, ಪಪಂ ಸದಸ್ಯರುಗಳು ಇದ್ದರು.