ಕುಶಾಲನಗರ, ನ. 30: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕ್ರೀಡಾ ವಿಕಸನಕ್ಕೆ ಅವಕಾಶ ಕಲ್ಪಿಸುವ ಮೂಲಕ ಪ್ರತಿಭೆಗಳನ್ನು ಹೊರಹೊಮ್ಮಿಸಲು ಅವಕಾಶ ಕಲ್ಪಿಸಬೇಕು ಎಂದು ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೇಶವಮೂರ್ತಿ ಹೇಳಿದರು.

ಕುಶಾಲನಗರ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಅಂತರ್ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಟೂರ್ನಮೆಂಟ್‍ಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡಾಸ್ಫೂರ್ತಿ ಹೆಚ್ಚಿಸುವ ಕ್ರೀಡೆಗಳತ್ತ ವಿದ್ಯಾರ್ಥಿಗಳು ಆಸಕ್ತರಾಗಬೇಕು. ಕ್ರೀಡೆ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವದರೊಂದಿಗೆ ದೈಹಿಕ ದೃಢತೆ ಹೆಚ್ಚಿಸಲು ಸಾಧ್ಯ ಎಂದರು.

ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕಿದೆ ಎಂದರು.

ಜ್ಞಾನಗಂಗಾ ವಸತಿ ಶಾಲಾ ಟ್ರಸ್ಟ್‍ನ ಮಾಜಿ ಅಧ್ಯಕ್ಷ ಟಿ.ಕೆ. ಸುಧೀರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟ್ರಸ್ಟ್‍ನ ಕಾರ್ಯದರ್ಶಿ ಅನಂತ ಪದ್ಮನಾಭ, ಖಜಾಂಚಿ ಪುಲಿಯಂಡ ರಾಮ್ ದೇವಯ್ಯ, ನಿರ್ದೇಶಕರಾದ ಮನು ಅಯ್ಯಪ್ಪ, ಶೋಭಾ ಅನಂತ್, ಮನುಬಾಯಿ, ಕೊಡಗು ಜಿಲ್ಲಾ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್‍ವಾಸ್, ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್ ಇದ್ದರು.

ಎರಡು ದಿನಗಳ ಕಾಲ ನಡೆಯಲಿರುವ ಅಂತರ್ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಕಬಡ್ಡಿ ವಿಭಾಗದಲ್ಲಿ 24 ತಂಡಗಳು, ಬಾಲಕಿಯರ ಬ್ಯಾಡ್ಮಿಂಟನ್ ವಿಭಾಗದ ಸ್ಪರ್ಧೆಗೆ 10, ಬಾಲಕರ ವಿಭಾಗಕ್ಕೆ 18 ತಂಡಗಳು ಪಾಲ್ಗೊಂಡಿದ್ದವು.

ಶನಿವಾರ ಬೆಳಿಗ್ಗೆ ಕಲಾ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚರ್ಚೆ ಮತ್ತು ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಗಳು ನಡೆಯಲಿವೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.