ಮಡಿಕೇರಿ, ನ. 30: ಭಾರತೀಯ ಸೇನಾಪಡೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯ ಸ್ಥಾನಕ್ಕೆ ಏರುವದ ರೊಂದಿಗೆ ಸೇನಾಪಡೆಯ ತರಬೇತಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆ ಗೊಂಡಿರುವ ಸೇನಾಜಿಲ್ಲೆ ಖ್ಯಾತಿಯ ಕೊಡಗಿನ ಅಧಿಕಾರಿ ಪಟ್ಟಚೆರವಂಡ ಚಂಗಪ್ಪ ತಿಮ್ಮಯ್ಯ (ವಿ.ಎಸ್.ಎಂ.) ಅವರನ್ನು ಸ್ವಗ್ರಾಮವಾದ ವೀರಾಜಪೇಟೆ ತಾಲೂಕಿನ ಚೇಲಾವರ ದಲ್ಲಿರುವ ಪಟ್ಟಚೆರವಂಡ ಕುಟುಂಬದ ಐನ್‍ಮನೆಯಲ್ಲಿ ಕುಟುಂಬಸ್ಥರು ಹೃದಯಸ್ಪರ್ಶಿಯಾಗಿ ಸ್ವಾಗತ ನೀಡಿ ಸನ್ಮಾನಿಸಿದರು.(ಮೊದಲ ಪುಟದಿಂದ) ಶುಕ್ರವಾರದಂದು ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದಲ್ಲಿರುವ ಪಟ್ಟಚೆರುವಂಡ ಐನ್ ಮನೆಗೆ ಪುತ್ರ ಲೆಫ್ಟಿನೆಂಟ್ ಕಮಾಂಡರ್ ಅರ್ಜುನ್ ದೇವಯ್ಯ, ಸಹೋದರಿ ರೇಖಾ ಹಾಗೂ ತಾಯಿ ಗೌರು ಚಂಗಪ್ಪ ಅವರೊಂದಿಗೆ 11 ಗಂಟೆಗೆ ಆಗಮಿಸಿದ ಸಂದರ್ಭ ಕುಟುಂಬಸ್ಥರು ತಳಿಯತಕ್ಕಿ ಬೊಳ್ಚದೊಂದಿಗೆ ದುಡಿಕೊಟ್ಟ್ ಪಾಟ್ ಹಾಗೂ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಸ್ವಾಗತವನ್ನು ನೀಡಿದರು.

ಐನ್ ಮನೆಗೆ ಬರುತ್ತಿದ್ದಂತೆಯೆ ಗುರುಕಾರೋಣ ಸ್ಥಾನಕ್ಕೆ ತೆರಳಿ ಗೌರವವನ್ನು ಸಲ್ಲಿಸಿದ ಅವರು, ಐನ್ ಮನೆಯಲ್ಲಿ ನೆಲ್ಲಕ್ಕಿ ನಡುಬಾಡೆಗೆ ವಂದಿಸಿ ಕುಟುಂಬಸ್ಥರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಐನ್ ಮನೆ ಬಳಿಯಲ್ಲೆ ಆಯೋಜಿತ ಸರಳ ಸಮಾರಂಭದಲ್ಲಿ ಕುಟುಂಬಸ್ಥರಿಂದ ಸನ್ಮಾನಕ್ಕೆ ಪಾತ್ರರಾದರು.

ಈ ಸಂದರ್ಭ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲ್ಲೂ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮುಖ್ಯ. ನಮ್ಮನ್ನು ನಾವು ಸಮಾಜದಲ್ಲಿ ಮತ್ತು ಶಾಶ್ವತವಾಗಿ ಗುರುತಿಸಿಕೊಳ್ಳು ವಂತಾಗಲು ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ದೃಢವಾಗಿ ನುಡಿದರು. ಬದುಕಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಕರೆ ನೀಡಿದರು.

ಪಟ್ಟಚೆರುವಂಡ ಕುಟುಂಬಸ್ಥರ ಸಂಖ್ಯೆ ಬೇರೆಯ ಕುಟುಂಬಗಳಿಗೆ ಹೋಲಿಸಿದಲ್ಲಿ ಸಾಕಷ್ಟು ಸಣ್ಣ ಪ್ರಮಾಣದಲ್ಲಿದೆ. ಆದರೆ, ನಮ್ಮಲ್ಲಿ ಇತಿಹಾಸ ಕಾಲದಿಂದಲೂ ಸೇನಾ ಪಡೆಗಳಿಂದ ಹಿಡಿದು ಮಹಿಳಾ ದಂತ ವೈದ್ಯರವರೆಗೆ ವೃತ್ತಿಪರರಿದ್ದು, ಎಲ್ಲರೂ ತಮ್ಮ ಕಠಿಣ ಪರಿಶ್ರಮದ ಹಿನ್ನೆಲೆಯಲ್ಲಿ ತಮ್ಮ ತಮ್ಮ ವೃತ್ತಿಗಳಿಗೆ ಗೌರವ ಮತ್ತು ಯಶಸ್ಸು ತಂದುಕೊಟ್ಟಿದ್ದಾರೆ ಎಂದು ಲೆ.ಜ. ತಿಮ್ಮಯ್ಯ ಹೇಳಿದರು.

ನಿವೃತ್ತ ಪ್ರಾಂಶುಪಾಲೆ ಕಾವೇರಮ್ಮ ಅವರು ಮಾತನಾಡಿ, ಯಾವದೇ ವ್ಯಕ್ತಿ ಅಧಿಕಾರ ಮತ್ತು ತನ್ನ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಮಥ್ರ್ಯ ಮತ್ತು ದಕ್ಷತೆ ಇರಬೇಕು. ಪ್ರತಿಯೊಬ್ಬರು ಅವರವರ ಕೆಲಸದಲ್ಲಿ ಈ ಮಾನದಂಡದಡಿಯಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಲ್ಲಿ ಯಶಸ್ಸು ಶತಃಸಿದ್ಧ. ಇದಕ್ಕೆ ಲೆ.ಜ. ಪಟ್ಟಚೆರುವಂಡ ತಿಮ್ಮಯ್ಯ ಅವರೇ ಉದಾಹರಣೆಯಾಗಿ ದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ಪಟ್ಟಚೆರುವಂಡ ಕುಟುಂಬದ ಪಟ್ಟೆದಾರರಾದ ಪಿ.ಬಿ ಬೆಳ್ಯಪ್ಪ ಮಾತನಾಡಿ, ಸುಪ್ರೀಂಕೋರ್ಟ್‍ನ ಆದೇಶದಂತೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಕೊಡಬೇಕಿದ್ದರೂ, ಅದು ಪರಾಭಾರೆ ಆಗದಂತೆ ನೋಡಿಕೊಳ್ಳಬೇಕಿದೆ, ಹಾಗಾಗಿ ಅಲ್ಲಿನ ಲಾಭಾಂಶವನ್ನು ಹೆಣ್ಣು ಮಕ್ಕಳಿಗೆ ಕೊಟ್ಟ್ಟು ಆಸ್ತಿ ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟರಲ್ಲದೆ, ಪೋಷಕರ ಆರೈಕೆಯ ಜವಾಬ್ದಾರಿಯೂ ಹೆಣ್ಣು ಮಕ್ಕಳ ಮೇಲೆ ಇರುವಂತಾಗ ಬೇಕೆಂದರು.

ಲೆ.ಜ. ತಿಮ್ಮಯ್ಯ ಅವರ ಸಹೋದರಿ ರೇಖಾ ಅವರು ಮಾತನಾಡಿ, ಪೋಷಕರು ಶಿಕ್ಷಣವೇ ಆಸ್ತಿ ಮತ್ತು ಶಕ್ತಿ ಎಂಬದನ್ನು ತೋರಿಸಿ ಕೊಟ್ಟಿರುವದೇ ಸಹೋದರ ಸೈನ್ಯದಲ್ಲಿ ಮಾಡಿರುವ ಸಾಧನೆಗೆ ಕಾರಣವೆಂದು ಮನದುಂಬಿ ನುಡಿದರು.

ಪ್ರತಿಯೊಬ್ಬರು ಹಣ ಆಸ್ತಿಯನ್ನು ನಂಬಿ ಬದುಕು ಮಾಡದೆ ಅತ್ಯುತ್ತಮ ಶಿಕ್ಷಣದ ಮೂಲಕ ಬದುಕನ್ನು ರೂಪಿಸಿಕೊಳ್ಳಲು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಪಟ್ಟಚೆರುವಂಡ ನಾಚಪ್ಪ, ಮಂಡೇಪಂಡ ಡಾಲಿ ಪೊನ್ನಪ್ಪ, ಪಟ್ಟಚೆರುವಂಡ ದಿನೇಶ್, ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತ ನಾಡಿದರು. ಇದೇ ಸಂದರ್ಭ ಜಿ. ಚಿದ್ವಿಲಾಸ್ ದಂಪತಿಗಳು ಮತ್ತು ಚೆಂಬಂಡ ಅಕ್ಕಯ್ಯಚ್ಚಿ ಅವರು ಯೋಧ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು.

ಪಟ್ಟಚೆರುವಂಡ ಮಾನ್ಯ ಮತ್ತು ಪುನೀತ ಪ್ರಾರ್ಥಿಸಿ, ಪಟ್ಟಚೆರುವಂಡ ಸೋಮಯ್ಯ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಪಟ್ಟಚೆರುವಂಡ ಧನು ಬೀಮಯ್ಯ ಮಾತನಾಡಿದರೆ, ಕಳ್ಳೀರ ಜಾನಕಿ ನಿರೂಪಿಸಿ, ಪಟ್ಟಚೆರುವಂಡ ಸುಬ್ಬಯ್ಯ ವಂದಿಸಿದರು. ಸನ್ಮಾನಿತರ ಪರಿಚಯವನ್ನು ಪ್ರವೀಣ್ ಪೊನ್ನಪ್ಪ ಮಾಡಿದರು..