ಸ್ವಾಮಿನಾಥನ್ ಸಮಿತಿ ವರದಿ ಜಾರಿ, ಸಾಲಮನ್ನಾ ಹಾಗೂ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ

ಗೋಣಿಕೊಪ್ಪಲು, ನ. 30: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ಸುಮಾರು 214 ಹೆಚ್ಚು ರೈತ ಸಂಘಟನೆಗಳ ಮೂರು ಲಕ್ಷಕ್ಕೂ ಹೆಚ್ಚು ರೈತರು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ನೇತೃತ್ವದಲ್ಲಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಪ್ರಮುಖರಿಗೆ ದ.ಭಾರತದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಭಾಗಿಯಾಗಿ ರೈತರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ದೆಹಲಿಯ ವಿವಿಧ ಕಡೆಗಳಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ರಾಮಲೀಲಾ ಮೈದಾನಕ್ಕೆ ಆಗಮಿಸಿತು. ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್, ಉತ್ತರ ಪ್ರದೇಶದ ರೈತ ಚಳವಳಿಯ ಮುಖಂಡರಾದ ವಿ.ಎಂ. ಸಿಂಗ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಕಳೆದ ಕೆಲವು ತಿಂಗಳುಗಳಿಂದ ರೈತರ ಪ್ರತಿಭಟನೆ ಹೆಚ್ಚುತ್ತಿದ್ದು ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ನೆರೆಯ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರೈತರ ಪ್ರತಿಭಟನಾ ಮೆರವಣಿಗೆಗೆ ರಾಜಧಾನಿ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ನಂತರ ಇದು ಹಿಂಸಾಚಾರಕ್ಕೆ ತಿರುಗಿದ್ದು ನೆನಪಿನಲ್ಲಿರುವಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಬೃಹತ್ ರೈತರ ಪ್ರತಿಭಟನೆ ನಡೆದಿದೆ. ಮಹಾರಾಷ್ಟ್ರದ ಮುಂಬೈ ಕೂಡ ಇತ್ತೀಚೆಗೆ ರೈತರ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ನವೆಂಬರ್ 22 ರಂದು ಲೋಕ ಸಂಘರ್ಷ ಮೋರ್ಚಾ ಕೃಷಿ ಭೂಮಿ ಮಾಲೀಕತ್ವ ಮತ್ತು ಅರಣ್ಯ ಹಕ್ಕು ಕಾಯಿದೆ ಜಾರಿಗೆ ಒತ್ತಾಯಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗಿಯಾಗಿದ್ದರು. ಈ ಪ್ರತಿಭಟನೆಯಲ್ಲಿ ಅಜಾದ್ ಮೈದಾನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗಿತ್ತು.ಕಳೆದ ಮಾರ್ಚ್ ತಿಂಗಳಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸಂಘಟನೆ ಮುಂದಾಳತ್ವದಲ್ಲಿ 25 ಸಾವಿರಕ್ಕೂ ಹೆಚ್ಚು ರೈತರು ದೆಹಲಿಯಲ್ಲೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು.ಇನ್ನು ಇತ್ತೀಚೆಗೆ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ತಮ್ಮ ಕಬ್ಬಿನ ಬಾಕಿ ಹಣ ಪಾವತಿಗೆ ಹಾಗೂ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಬೆಂಗಳೂರು,ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಪ್ರಮುಖವಾಗಿ ವಿಯೆಟ್ನಾಂ ಕರಿಮೆಣಸು ಆಮದು ನೀತಿಯ ವಿರುದ್ದ ಕೇಂದ್ರದ ವಾಣಿಜ್ಯ ಮಂತ್ರಿಗಳಿಗೆ ಮನವಿ ಪತ್ರ ನೀಡಿ ಜಿಲ್ಲೆಗೆ ವಿಯೆಟ್ನಾಂ ಕರಿಮೆಣಸು ಆಮದು ಮಾಡಿಕೊಳ್ಳದಂತೆ ಒತ್ತಾಯಿಸಲಾಯಿತು.

ಕೊಡಗು ಜಿಲ್ಲಾ ರೈತ ಸಂಘದ ಮುಖಂಡರುಗಳಾದ ಚೆಟ್ರುಮಾಡ ಸುಜಯ್‍ಬೋಪಯ್ಯ, ಮನೆಯಪಂಡ ಗೌತಮ್ ಪೊನ್ನಪ್ಪ,ಮಂಡೇಪಂಡ ಪ್ರವೀಣ್ ಬೋಪಯ್ಯ, ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪುಳುವಂಗಡ ದಿನೇಶ್,ತೀತರಮಾಡ ಸುನೀಲ್ ಬೋಪಣ್ಣ, ಅಜ್ಜಮಾಡ ಚಂಗಪ್ಪ, ತೀತರಮಾಡ ರಾಜ, ಚೆಪ್ಪುಡೀರ ಕಾರ್ಯಪ್ಪ, ಹೆಚ್.ಎಸ್.ಮಹೇಶ್, ಹೆಚ್.ಟಿ.ಉಮೇಶ್, ಮಲ್ಚೀರ ತಿಮ್ಮಯ್ಯ, ಬೋಜಪ್ಪ, ಅಶೋಕ್, ಬೋಪಣ್ಣ, ಪೂವಣ್ಣ, ಗಿರೀಶ್, ಮಚ್ಚಮಾಡ ರಾಜೆಂದ್ರ, ಪೂವಪ್ಪ, ಚಿಮ್ಮಂಗಡ ಗಣೇಶ್, ಪುಳುವಂಗಡ ಸುರೇಶ್ ಪೂಣಚ್ಚ, ಹೆಚ್.ಕೆ. ಶಂಕರಪ್ಪ, ಮುಂತಾದವರು ಕೊಡಗು ಜಿಲ್ಲೆಯಿಂದ ರೈತ ಸಂಘದ ಪರವಾಗಿ ಭಾಗಿಯಾಗಿದ್ದರು.

-ಹೆಚ್.ಕೆ.ಜಗದೀಶ್