ಮಡಿಕೇರಿ, ನ. 30: ತಲಕಾವೇರಿಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ 12 ವರ್ಷಗಳ ಹಿಂದೆ ಭೂಗತಗೊಳಿಸಿರುವ ಹಳೆಯ ಶಿವಲಿಂಗ ವನ್ನು ಕಡಲಿನಲ್ಲಿ ವಿಸರ್ಜಿಸಬೇಕೆಂಬ ಅಭಿಪ್ರಾಯ ಕುರಿತು ಒಮ್ಮತ ಮೂಡದೆ ಗೊಂದಲ ಹುಟ್ಟಿ ಕೊಂಡಿದೆ.ಈ ಸಂಬಂಧ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮತಿ ಲಭಿಸಿರುವದಾಗಿ ಸುಳಿವು ನೀಡಿದ್ದಾರೆ. ಬದಲಾಗಿ ಇಲಾಖೆಯ ಆಗಮ ಪಂಡಿತರು ಅಥವಾ ಆಯುಕ್ತರ ಕಚೇರಿ ಇದುವರೆಗೆ ಯಾವದೇ ಲಿಖಿತ ಆದೇಶ ನೀಡಿಲ್ಲ ಎಂಬ ಮಾತು ಕೇಳಿ ಬಂದಿದೆ. ಒಟ್ಟಿನಲ್ಲಿ ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಪೂರ್ವ ತಯಾರಿ ನಡುವೆಯೇ ಗೊಂದಲದ ವಾತಾವರಣ ಕೇಳಿ ಬರುವಂತಾಗಿದೆ.ಬ್ರಹ್ಮಕಲಶೋತ್ಸವಕ್ಕೆ ಹಸಿರು ನಿಶಾನೆ

ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದ ಶ್ರೀ ಅಗಸ್ತ್ಯೇಶ್ವರ ಗುಡಿಯಲ್ಲಿ ದಶಕದ ಹಿಂದೆ, ಶಿಥಿಲಗೊಂಡಿರುವ ಹಳೆಯ ಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸುವ ತೀರ್ಮಾನವನ್ನು, ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತರು ಆಕ್ಷೇಪಿಸಿದ್ದು, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ನಡೆಸಲು ಮಾತ್ರ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.

ಕಳೆದ ಜೂನ್ ಹಾಗೂ ಜುಲೈ ತಿಂಗಳ ನಡುವೆ ತಲಕಾವೇರಿ ಕ್ಷೇತ್ರದಲ್ಲಿ ಈಗಿನ ವ್ಯವಸ್ಥಾಪನಾ ಸಮಿತಿಯು, ಕ್ಷೇತ್ರದ ಅಭಿವೃದ್ಧಿಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಬಂಧ ಕೇರಳದ ಜ್ಯೋತಿಸಿ ನಾರಾಯಣ ಪೊದುವಾಳ್ ಮುಖಾಂತರ ಅಷ್ಟಮಂಗಲ ಪ್ರಶ್ನೆ ಏರ್ಪಡಿಸಿತ್ತು. ಈ ವೇಳೆ 2004ರಲ್ಲಿ ಕ್ಷೇತ್ರದಲ್ಲಿ ನೂತನ ಗುಡಿಯೊಂದಿಗೆ ಅಗಸ್ತ್ಯೇಶ್ವರನ ಹಳೆಯ ಪೂಜಾ ಬಿಂಬವನ್ನು ಶಿಥಿಲಗೊಂಡ ಕಾರಣ ಭೂಗತವಾಗಿಸಿ, ಅಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪಿಸಿರುವದು ಸರಿಯಲ್ಲವೆಂದು ಅಭಿಪ್ರಾಯಪಡಲಾಗಿತ್ತು.

ಅಲ್ಲದೆ, ಅಗಸ್ತ್ಯೇಶ್ವರನ ಹಳೆಯ ಬಿಂಬವನ್ನು ಗರ್ಭಗೃಹದ ಭೂಗತ ಸ್ಥಳದಿಂದ ಸ್ಥಾನಪಲ್ಲಟಗೊಳಿಸಿ ಬಂಗಾಳಕೊಲ್ಲಿಯ ‘ಪೂಂಪೂಹಾರ್’ ಕಡಲಿನಲ್ಲಿ ವಿಸರ್ಜಿಸಬೇಕೆಂದು ನಿರ್ದೇಶನ ನೀಡಲಾಗಿತ್ತು. ಈ ಬಗ್ಗೆ ಕಳೆದ ಅಕ್ಟೋಬರ್ ಮಾಸದ ತುಲಾ ಸಂಕ್ರಮಣದ ಬಳಿಕ ಕಾರ್ಯಪ್ರವೃತ್ತರಾಗುವಂತೆ ನಿರ್ಧಾರ ಕೂಡ ತೆಗೆದುಕೊಳ್ಳಲಾಗಿತ್ತು. ಈ ನಡುವೆ ಈಚೆಗೆ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರಾಗಿರುವ ಶಿವಕುಮಾರ್ ಎಂಬವರು ಕ್ಷೇತ್ರಕ್ಕೆ ಭೇಟಿ ನೀಡಿ, ಅಗಸ್ತ್ಯೇಶ್ವರ ಸನ್ನಿಧಿಯೊಂದಿಗೆ ಕಾವೇರಿ ತೀರ್ಥ ಕುಂಡಿಕೆಯನ್ನು ಖುದ್ದು ಸಂದರ್ಶಿಸಿದ್ದರು.

ಅಲ್ಲದೆ, ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಜೀರ್ಣೋದ್ಧಾರದೊಂದಿಗೆ 2004ರಲ್ಲಿ ಅಂದಿನ ಕ್ಷೇತ್ರ ತಂತ್ರಿಗಳಾದ ದಿ. ನೀಲೇಶ್ವರ ಪದ್ಮನಾಭ ತಂತ್ರಿಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆ ಆಗಮಪಂಡಿತರುಗಳ ಸಲಹೆಯಂತೆ ಕೈಗೊಂಡಿರುವ ದೇವತಾ ಕೈಂಕರ್ಯಗಳನ್ನು 12 ವರ್ಷಗಳ ಬಳಿಕ ವಿಮರ್ಶಿಸುವ ಮೂಲಕ ಭೂಗತ ಲಿಂಗ ವಿಸರ್ಜನೆಯಂತಹ ನಿರ್ಧಾರ ತೆಗೆದುಕೊಂಡ ಔಚಿತ್ಯವನ್ನು ಪ್ರಶ್ನಿಸಿರುವರೆಂದು ಗೊತ್ತಾಗಿದೆ.

ಮಾತ್ರವಲ್ಲದೆ, ಈ ರೀತಿಯಾಗಿ ಭಕ್ತರಲ್ಲಿ ಗೊಂದಲಕ್ಕೆ ಕಾರಣವಾಗುವಂತಹ ತೀರ್ಮಾನ ತೆಗೆದುಕೊಂಡಿದ್ದೇ ಆದರೆ, ಭವಿಷ್ಯದಲ್ಲಿ ಯಾವದೇ ಪರಿಣಾಮಗಳಿಗೆ ಸಂಬಂಧಿಸಿದವರೇ ಹೊಣೆಗಾರರೆಂದು ಸೂಚ್ಯವಾಗಿ ಆಗಮ ಪಂಡಿತರು ಮುನ್ನೆಚ್ಚರಿಸಿರುವರೆಂದೂ ತಿಳಿದು ಬಂದಿದೆ. ಬದಲಾಗಿ ಕಾಲ ಕಾಲಕ್ಕೆ ದೈವಿಕ ಕೈಂಕರ್ಯಗಳೊಂದಿಗೆ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿಸಲು ತಮ್ಮಿಂದ ಅಥವಾ ಸರಕಾರದಿಂದ ಯಾವದೇ ಆಕ್ಷೇಪವಿಲ್ಲವೆಂದೂ, ಇಂತಹ ಧಾರ್ಮಿಕ ವಿಧಿಗಳನ್ನು ಸಮಯಕ್ಕೆ ತಕ್ಕಂತೆ ನಡೆಸಿಕೊಂಡು ಹೋಗುವಂತೆ ಅವರು ಸಲಹೆ ನೀಡಿರುವದಾಗಿ ಮೂಲಗಳಿಂದ ಖಾತರಿಪಟ್ಟಿದೆ.

ಅಪಪ್ರಚಾರಕ್ಕೆ ಆಕ್ಷೇಪ

ತಲಕಾವೇರಿಯಲ್ಲಿ ಹಳೆಯ ಶಿವಲಿಂಗ ಭೂಗತಗೊಳಿಸಿರುವ ಪರಿಣಾಮ, ಈ ಬಾರಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸುವಂತಾಯಿತು ಎಂಬ ಅಪಪ್ರಚಾರದ ಬಗ್ಗೆ ತೀವ್ರ ಆಕ್ಷೇಪಿಸಿರುವ ಆಗಮ ಪಂಡಿತರು, 2004ರಲ್ಲಿ ನಡೆಸಿರುವ ದೇವತಾ ಕಾರ್ಯದ ಮರು ವರ್ಷದಿಂದ ಇಷ್ಟೊಂದು

ಸುದೀರ್ಘ ಅವಧಿಗೆ ಏಕೆ ಅನಾಹುತಗಳು ಎದುರಾಗಿರಲಿಲ್ಲ ಎಂದು ಪ್ರತಿ ಪ್ರಶ್ನೆ ಕೇಳಿದ್ದಾರೆ ಎಂದು ಗೊತ್ತಾಗಿದೆ.

ಇಂತಹ ಅಪ ಪ್ರಚಾರ, ಗೊಂದಲ, ಸಂಶಯ ಹುಟ್ಟು ಹಾಕದೆ ಕಾಲ ಕಾಲಕ್ಕೆ ಆಯ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ದೇವತಾ ಕೈಂಕರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ತಿಳಿ ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆ ನಡುವೆ ಡಿ. 12 ರಂದು ಅಭಿವೃದ್ಧಿ ಸಂಬಂಧ ತಲಕಾವೇರಿಯಲ್ಲಿ ಅಗಸ್ತ್ಯೇಶ್ವರ ಲಿಂಗವನ್ನು ಬಾಲಾಲಯಕ್ಕೆ ಇರಿಸಲು ತಾತ್ಕಾಲಿಕ ಗುಡಿ ಕೆಲಸ ನಡೆಯುತ್ತಿದೆ.

ಡಿ. 10 ರಂದು ತೀರ್ಪು

ಈ ನಡುವೆ ಎಂ.ಬಿ. ದೇವಯ್ಯ ಹಾಗೂ ಇತರರನ್ನು ಒಳಗೊಂಡ ಸಮಿತಿಯೊಂದು, ಈ ಹಿಂದೆ ನ್ಯಾಯಾಲಯದಲ್ಲಿ ಈಗಿನ ವ್ಯವಸ್ಥಾಪನಾ ಸಮಿತಿ ವಿರುದ್ಧ ವ್ಯಾಜ್ಯ ಹೂಡಿದ್ದು, ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮೇಲಿನ ಪ್ರಕರಣದ ವಿಚಾರಣೆ ಮುಕ್ತಾಯ ಹಂತದೊಂದಿಗೆ ಡಿ. 10 ರಂದು ಅಂತಿಮ ತೀರ್ಪು ಹೊರ ಬೀಳುವ ನಿರೀಕ್ಷೆ ಇದೆ.

ಡಿ. 9 ರಿಂದ ತಲಕಾವೇರಿಯಲ್ಲಿ ದೈವಿಕ ಕೈಂಕರ್ಯ ಗಳೊಂದಿಗೆ, ಅಗಸ್ತ್ಯೇಶ್ವರ ಗುಡಿಯ ಈಗಿನ ಶಿವಲಿಂಗ ವನ್ನು ತಾ. 12 ರಂದು ಬಾಲಾಲಯದಲ್ಲಿ ಇರಿಸಲು ಮತ್ತು ಭೂಗತ ಹಳೆಯ ಲಿಂಗವನ್ನು ಗರ್ಭ ಗೃಹದಿಂದ ಹೊರ ತೆಗೆದು ಕಡಲಿನಲ್ಲಿ ವಿಸರ್ಜಿಸಲು ತಯಾರಿ ನಡೆದಿದೆ. ಈ ಬಗ್ಗೆ ತಮಗೆ ಧಾರ್ಮಿಕ ದತ್ತಿ ಇಲಾಖೆಯ ಅನುಮತಿಯೊಂದಿಗೆ ಕ್ಷೇತ್ರ ತಂತ್ರಿಗಳ ನಿರ್ದೇಶನದಂತೆ ಕಾರ್ಯಕ್ರಮ ರೂಪಿಸಿರುವದಾಗಿ ದೇವಾಲಯ ವ್ಯವಸ್ಥಾಪನಾ ಸಮಿತಿ ಖಚಿತ ಪಡಿಸಿದೆ.