ಮಡಿಕೇರಿ, ನ. 30: ಮುಂದಿನ ಫೆಬ್ರವರಿ 15 ರಿಂದ 23ರ ತನಕ ಭಾಗಮಂಡಲದಲ್ಲಿ ಜರುಗಲಿರುವ ಅತಿರುದ್ರ ಮಹಾಯಾಗ ಸಂಬಂಧದ ಸಂಪರ್ಕ ಕಚೇರಿಯನ್ನು ಇಲ್ಲಿನ ಕಾಫಿ ಕೃಪಾ ಕಟ್ಟಡದಲ್ಲಿ ಇಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸ್ವಾಮೀಜಿ ಕೊಡಗು ಸೇರಿದಂತೆ ಜನತೆಯ ಶಾಂತಿ ನೆಮ್ಮದಿಗಾಗಿ ಲೋಕಲ್ಯಾಣಾರ್ಥ ಏರ್ಪಡಿಸಿರುವ ಯಾಗದಲ್ಲಿ ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು. ಇಂದು ಚಾಲನೆಗೊಂಡಿರುವ ಯಾಗ ಸಂಪರ್ಕ ಕಚೇರಿಯು ಎಲ್ಲರಲ್ಲಿ ನಂಬಿಕೆ, ವಿಶ್ವಾಸದಿಂದಿಗೆ ಸಂಕಲ್ಪಿಸಿಕೊಂಡಿರುವ ದೈವಿಕ ಕೈಂಕರ್ಯದ ಯಶಸ್ವಿಗೆ ನಾಂದಿಯಾಗಲಿ ಎಂದು ಆಶಿಸಿದರು. ಕೊಡಗಿನಲ್ಲಿ ಎದುರಾಗಿದ್ದ ಪ್ರಾಕೃತಿಕ ವಿಕೋಪದ ಸಂಕಟ ನಿವಾರಣೆಯಾಗಿ ಜನತೆಯಲ್ಲಿ ನೆಮ್ಮದಿಯನ್ನು ದೇವರು ಕರುಣಿಸಲೆಂದು ಆಶಯ ನುಡಿಯಾಡಿದರು.

ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್, ಸಮಿತಿ ಪ್ರಮುಖ ಕೋಡಿ ಪೊನ್ನಪ್ಪ ಅವರುಗಳು ಮಾತನಾಡಿ ಅತಿರುದ್ರ ಮಹಾಯಾಗದ ಉದ್ದೇಶ ಮತ್ತು ಎಲ್ಲರ ಸಹಕಾರಕ್ಕೆ ನಿವೇದಿಸಿದರು. ಈ ವೇಳೆ ಪ್ರಮುಖರಾದ ಚಕ್ಕೇರ ಮನು ಕಾವೇರಪ್ಪ, ಎಂ.ಬಿ. ದೇವಯ್ಯ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು. ವಿಜಯ ವಿನಾಯಕ ಪ್ರಧಾನ ಅರ್ಚಕ ಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಪೂಜಾ ಕೈಂಕರ್ಯ, ಹೋಮ ನೆರವೇರಿತು.