ಮಡಿಕೇರಿ, ನ. 30: ಕೊಡಗಿನಲ್ಲಿ ಜನತೆಯ ಕಷ್ಟಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತಳೆದಿರುವ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಭಾರತ ದೂರವಾಣಿ ಸಂಚಾರ ನಿಗಮದ ಕಾರ್ಯವೈಖರಿ ಕುರಿತು ಇಂದು ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.ಕೇಂದ್ರ ಸರಕಾರದ ದೂರವಾಣಿ ಸಂಚಾರ ನಿಗಮದ ಅಧಿಕಾರಿ ವಿರುದ್ಧ ಹರಿಹಾಯ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಜಿಲ್ಲಾ ವ್ಯವಸ್ಥಾಪಕ ಸುಬ್ಬಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ತಮ್ಮ ಮನೆಯ ದೂರವಾಣಿ ಮೂರು ತಿಂಗಳಿನಿಂದ ಕೆಟ್ಟು ನಿಂತಿದೆ ಎಂದು ಮಾತಿನ ಚಾಟಿ ಬೀಸಿದರೆ, ಜಿಲ್ಲಾಧಿಕಾರಿ ‘ ನಿಮಗೆ ನಾಚಿಕೆ ಆಗುವದಿಲ್ಲವೆ?’ ನನ್ನ ವಸತಿಯ ದೂರವಾಣಿ ಕೂಡ ಸರಿಯಿಲ್ಲ. ನಮಗೆ ಹೀಗಾದರೆ ಜನತೆಗೆ ಏನು ಸೇವೆ ಕೊಡುತ್ತೀರಾ? ಎಂದು ಕುಟುಕಿದರು.

ಈ ವೇಳೆ ಸಭೆಯಲ್ಲಿದ್ದ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷರ ಸಹಿತ ಅನೇಕರು ದನಿಗೂಡಿಸಿ, ಈ ಇಲಾಖೆಯ ಮಂದಿಗೆ ಕಲ್ಪಿಸಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕಚೇರಿಗಳಿಗೆ ಬೀಗ ಹಾಕುವದು ಒಳಿತು, ಸೌಜನ್ಯಕ್ಕೂ ಯಾರೊಬ್ಬರೂ ಸ್ಪಂದಿಸುವದಿಲ್ಲ ವೆಂದು ಟೀಕಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ ಸಂಬಂಧಿಸಿದ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಅಧಿಕಾರಿಯ ದೂರವಾಣಿಗಳನ್ನು ಸಾರ್ವಜನಿಕ ವಾಗಿ ಪ್ರಕಟಿಸುವಂತಾಗಲಿ, ಅವರುಗಳೇ ಸಾರ್ವಜನಿಕರಿಂದ ನೇರವಾಗಿ ಸಮಸ್ಯೆಗಳನ್ನು ಆಲಿಸಿ ಉತ್ತರ ಕೊಡುವಂತಾಗಲಿ ಎಂದು ಅಣಕವಾಡಿದರು.

ಅರಣ್ಯ ಸೇವೆ ಬೇಡ : ಕಳೆದ 6 ವರ್ಷಗಳಿಂದ ಗಾಳಿಬೀಡು ಗ್ರಾ.ಪಂ. ಕಟ್ಟಡಕ್ಕೆ ನಿವೇಶನ ಕಲ್ಪಿಸಲು ತೊಡರು ಗಾಲು ಹಾಕಿರುವ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಗೊಂಡು, ಏರುದನಿಯಲ್ಲಿ

(ಮೊದಲ ಪುಟದಿಂದ) ಮಾತಿನ ಚಾಟಿ ಬೀಸಿದ ಅಪ್ಪಚ್ಚುರಂಜನ್ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಭಾರತೀಯ ಅರಣ್ಯ ಸೇವೆ (ಐಎಫ್‍ಎಸ್) ಹುದ್ದೆ ರದ್ದುಗೊಳಿಸಲು ಪ್ರಸ್ತಾಪಿಸುವದಾಗಿ ಘೋಷಿಸಿದರು.

ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ರೈತನ ಸ್ವಂತ ಜಾಗದ ಮರಗಳ ಸಹಿತ ಪ್ರಕೃತಿ ವಿಪತ್ತಿನಿಂದ ಬಿದ್ದಿರುವ ಮರಗಳ ತೆರವಿಗೂ ಈ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಆನೆಗಳ ಹಾವಳಿ ತಡೆಗೆ ಕಾಳಜಿ ತೋರದೆ ಇರುವ ಕಂದಕಗಳಲ್ಲಿ ಮಣ್ಣು ಅಗೆಯುತ್ತಾ, ಹಣ ದುರುಪಯೋಗದಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾನು 200 ಬಾರಿ ಅರಣ್ಯ ಕಚೇರಿಗೆ ಅಲೆಯುತ್ತಿದ್ದರೂ, ಸರಕಾರದ ಅಂಗವಾಗಿರುವ ಗ್ರಾ.ಪಂ. ಕಟ್ಟಡಕ್ಕೆ ಮಂಜೂರಾತಿ ಸಾಧ್ಯವಾಗಿಲ್ಲವೆಂದು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಟೀಕಿಸಿದರು. ಮಧ್ಯಪ್ರವೇಶಿಸಿದ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಜನಪರ ಕೆಲಸಗಳಿಗೆ ಅಡ್ಡಿ ಪಡಿಸದೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವಂತೆ ತಿಳಿ ಹೇಳಿದರು. ಶಾಸಕದ್ವಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಅಪ್ಪಚ್ಚುರಂಜನ್ ಮೂರು ದಿನಗಳಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದರು.

ಆರೋಗ್ಯ ಇಲಾಖೆಯ ಸಮಸ್ಯೆ ಬಗ್ಗೆ ಸದಸ್ಯರುಗಳಾದ ಡಾ. ಬಿ.ಸಿ. ನವೀನ್ ಹಾಗೂ ಡಾ. ಎಂ.ಆರ್. ಅಯ್ಯಪ್ಪ ಅವರುಗಳು ಪ್ರಸ್ತಾಪಿಸುತ್ತಾ, ಸರಕಾರದ ಯೋಜನೆಯಡಿ ಬಡ ರೋಗಿಗಳಿಗೆ ಲಭಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಗಮನ ಸೆಳೆದರು. ಬಡ ರೋಗಿಗಳ ಚಿಕಿತ್ಸೆಗೆ ಆರೋಗ್ಯ ಸುರಕ್ಷಾ ನಿಧಿ ಸದ್ಭಳಕೆ ಮಾಡಬೇಕೆಂದು ತಿಳಿ ಹೇಳಿದರು. ತಾವೇ ಜಿಲ್ಲಾಸ್ಪತ್ರೆಯ ವೈದ್ಯರ ಬಳಿ ಕಳುಹಿಸಿದ್ದ ಬಡರೋಗಿಯೊಬ್ಬರ ಚಿಕಿತ್ಸೆಗೆ ರೂ. 35 ಸಾವಿರ ವೆಚ್ವದ ಕುರಿತು ಆಸ್ಪತ್ರೆ ವೈದ್ಯರು ಪ್ರಸ್ತಾಪಿಸಿದ್ದಾಗಿ ಡಾ. ನವೀನ್ ಗಮನ ಸೆಳೆದರು.

ಜಿಲ್ಲಾಧಿಕಾರಿ ಶ್ರೀ ವಿದ್ಯಾ ಹಾಗೂ ಸಂಸದರು ಮತ್ತು ಶಾಸಕರು ಈ ಬಗ್ಗೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆ ಅಧಿಕಾರಿ ನಿಗಾ ವಹಿಸಿ ಬಡ ರೋಗಿಗಳ ಸೇವೆಗೆ ಅಗತ್ಯ ಗಮನ ಹರಿಸಲು ಸೂಚಿಸಿದರು. ಆಧುನಿಕ ತಂತ್ರಜ್ಞಾನವಿರುವ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳ ಸಹಿತ ಸಾರ್ವಜನಿಕ ಆರೋಗ್ಯ ಶಿಬಿರ ಆಯೋಜಿಸುವಂತೆ ಪ್ರತಾಪ್ ಸಿಂಹ ಸಲಹೆ ನೀಡಿದರು. ಈ ಬಗ್ಗೆ ಎಲ್ಲಾ ರೀತಿಯ ಸಹಕಾರದ ಭರವಸೆ ನೀಡಿದರು. ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ, ನಷ್ಟ ಪರಿಹಾರ, ರಸ್ತೆ ಸಮಸ್ಯೆ ಇತ್ಯಾದಿ ಬಗ್ಗೆ ಲೋಕೋಪಯೋಗಿ ಸಹಿತ ಇತರ ಅಧಿಕಾರಿಗಳ ವಿರುದ್ಧವೂ ಟೀಕೆ ಕೇಳಿ ಬಂತು.

ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಕಷ್ಟು ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ಓಡಾಡಲು ತುಂಬಾ ತೊಂದರೆಯಾಗಿದ್ದು, ಆದ್ದರಿಂದ ಒಂದು ವಾರದೊಳಗೆ ಗ್ರಾಮೀಣ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟ ಇಂಜಿನಿಯರ್‍ಗೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸೂಚನೆ ನೀಡಿದರು.

ಸದ್ಯ ಈಗ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಗ್ರಾಮೀಣ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಕಾರ್ಯವಾಗಿಲ್ಲ. ಗ್ರಾಮೀಣ ರಸ್ತೆಗಳನ್ನು ಸರಿಪಡಿಸಬೇಕು. ಜೊತೆಗೆ ರಸ್ತೆ ಗುಂಡಿ ಮುಚ್ಚುವಂತೆ ಪಂಚಾಯತ್ ರಾಜ್ ಇಂಜಿನಿಯರ್‍ಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ನಿರ್ದೇಶನ ನೀಡಿದರು.

ಸಮಿತಿ ಸದಸ್ಯ ಸುಭಾಷ್ ಸೋಮಯ್ಯ ಅವರು ಎರಡನೇ ಮೊಣ್ಣಂಗೇರಿ, ಕಾಲೂರು ಮತ್ತಿತರ ಕಡೆಗಳಲ್ಲಿ ತೋಟದ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕವಿಲ್ಲದೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ರಸ್ತೆ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಅಡುಗೆ ಅನಿಲ ಸಂಪರ್ಕವಿಲ್ಲದ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಬೇಕು. ಹಾಗೆಯೇ ವಿದ್ಯುತ್ ಸಂಪರ್ಕವಿಲ್ಲದ ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು.

ಈ ಸಂದರ್ಭ ಮಾತನಾಡಿದ ಸಮಿತಿ ಸದಸ್ಯ ಮನುಮುತ್ತಪ್ಪ ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಟ್ರಾನ್ಸ್‍ಫಾರಂ ಇಲ್ಲದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಕೋಪಟ್ಟಿ ಬಳಿ ಪೈಸಾರಿ ಜಾಗವಿದ್ದು, ಅಲ್ಲಿ 66 ಕೆ.ವಿ.ಯ ವಿದ್ಯುತ್ ಘಟಕ ಸ್ಥಾಪಿಸಿ ಆ ಭಾಗದ ಎಲ್ಲಾ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಜೊತೆಗೆ ನಾಪೋಕ್ಲುವಿನಲ್ಲಿ ವಿದ್ಯುತ್ ಬಿಲ್ಲು ಪಾವತಿಸುವ ಕೇಂದ್ರ ತೆರೆಯುವಂತಾಗಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಅಪ್ಪಚ್ಚುರಂಜನ್ 66 ಕೆ.ವಿ. ವಿದ್ಯುತ್ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕೋಪಟ್ಟಿ, ಬಾಳೆಲೆ, ಕೊಡ್ಲಿಪೇಟೆ, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ಗುರುತಿಸಲಾಗಿದ್ದು, ಇಂತಹ ಕಡೆಗಳಲ್ಲಿ ಕೂಡಲೇ 66 ಕೆ.ವಿ. ವಿದ್ಯುತ್ ಘಟಕ ಸ್ಥಾಪಿಸಬೇಕು ಎಂದು ಸೆಸ್ಕ್ ಇಂಜಿನಿಯರ್ ಅವರಿಗೆ ಸೂಚನೆ ನೀಡಿದರು.

ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಿಸಬೇಕು ಎಂದು ಶಾಸಕ ರಂಜನ್ ನಿರ್ದೇಶನ ನೀಡಿದರು. ಇನ್ನೂ ಹಲವು ಹಾಡಿಗಳ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ತಿಳಿಸಿದರು. ಗಿರಿಜನರಿಗೆ ಪೌಷ್ಟಿಕ ಆಹಾರ ಸಮರ್ಪಕವಾಗಿ ವಿತರಿಸಬೇಕು. ಜನಪ್ರತಿನಿಧಿಗಳ ಸಮ್ಮುಖ ಅಕ್ಕಿ, ಬೇಳೆ, ರಾಗಿ, ಮೊಟ್ಟೆ, ಎಣ್ಣೆ ವಿತರಿಸುವಂತೆ ಪ್ರತಾಪ್ ಸಿಂಹ ಸೂಚನೆ ನೀಡಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಯೋಜನೆಯಡಿ ಸಾಕಷ್ಟು ಕಾರ್ಯಕ್ರಮಗಳು ಇದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಸದರಾದ ಪ್ರತಾಪ್ ಸಿಂಹ ಅವರು ಸಲಹೆ ಮಾಡಿದರು. ಜಿಲ್ಲೆಯಲ್ಲಿ ಉಂಟಾದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಸಲಹೆ ಮಾಡಿದರು. ಈ ಸಂಬಂಧ ಮಾಹಿತಿ ನೀಡಿದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ ಸಂಬಂಧಪಟ್ಟ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾದ ತಕ್ಷಣ ಕಳುಹಿಸಿಕೊಡಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಪ್ರಕೃತಿ ವಿಕೋಪ ಕಾರ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಹಣದ ಕೊರತೆಯಿಲ್ಲ ಎಂದು ಮಾಹಿತಿ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸಂಪರ್ಕವಾಗಿದ್ದರೂ ಸಹ ಕಾಲು ರಸ್ತೆಗಳನ್ನು ಸರಿಪಡಿಸಬೇಕು. ಆ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಹಾಗೂ ಕುಡಿಯುವ ನೀರು ಒದಗಿಸಬೇಕಿದೆ ಎಂದು ತಿಳಿಸಿದರು.

ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನವೇ ಅಸ್ತವ್ಯಸ್ತ ಉಂಟಾಗಿತ್ತು. ರಸ್ತೆ, ಸೇತುವೆ, ಜೀವಹಾನಿ, ಬೆಳೆಹಾನಿ ಉಂಟಾಯಿತು. ಇದರಿಂದ ಇಲ್ಲಿನ ಜನರು ತತ್ತರಿಸಿದರು. ಆ ಸಂದರ್ಭದಲ್ಲಿ ಸರ್ಕಾರದ ಜೊತೆ ಸಾರ್ವಜನಿಕರಿಂದ ಅಪಾರ ಪ್ರಮಾಣದ ವಸ್ತುಗಳು ಹಣ ಹರಿದು ಬಂದಿತು. ಆದರೆ ಯಾವ ರೀತಿ ಉಪಯೋಗವಾಗುತ್ತಿದೆ ಎಂಬದು ತಿಳಿಯುತ್ತಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಹಣ ಹೋಗಿದೆ. ಉಳಿದಂತೆ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ನಿಯಮದಂತೆ ಹಣವನ್ನು ಖರ್ಚು ಮಾಡಲಾಗಿದೆ. ಜೀವ ಹಾನಿಯಾದವರಿಗೆ ಪರಿಹಾರ ಭರಿಸಲಾಗಿದೆ. ಮಣ್ಣು ತೆರವುಗೊಳಿಸುವದು ಮತ್ತಿತರ ಕಾರ್ಯಕ್ಕಾಗಿ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಕೇಂದ್ರ ಸರ್ಕಾರದಿಂದ 546 ಕೋಟಿ ರೂ. ಬಿಡುಗಡೆಯಾಗಿದ್ದು, ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಯಾಗಬೇಕು ಎಂದು ತಿಳಿಸಿದರು. ನಿರಾಶ್ರಿತ ಕುಟುಂಬಗಳಿಗೆ ಬಾಡಿಗೆ ಭರಿಸಲಾಗುವದು ಎಂದು ಹೇಳಲಾಗಿತ್ತು, ಆದರೆ ಇದುವರೆಗೆ ಯಾವದೇ ಕಾರ್ಯಗಳು ಆಗಿಲ್ಲ ಎಂದು ಮನುಮುತ್ತಪ್ಪ ಅತೃಪ್ತಿ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸದ್ಯದಲ್ಲಿಯೇ ಚತುಷ್ಪದ ರಸ್ತೆ : ಮೈಸೂರು ಬಳಿ ಇಲವಾಲ, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ ಮಾರ್ಗದ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದ್ದು, ಈ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪದ ರಸ್ತೆಯನ್ನಾಗಿ ನಿರ್ಮಿಸುವ ಕಾರ್ಯಕ್ಕೆ ಸದ್ಯದಲ್ಲಿಯೇ ಚಾಲನೆ ದೊರೆಯಲಿದೆ ಎಂದು ಸಂಸದÀ ಪ್ರತಾಪ್ ಸಿಂಹ ತಿಳಿಸಿದರು.

ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ ಮಾರ್ಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಈಗಾಗಲೇ ಹೆದ್ದಾರಿಗೆ ಸಂಬಂಧಪಟ್ಟಂತೆ ಇಂಜಿನಿಯರನ್ನು ನಿಯೋಜಿಸಲಾಗಿದೆ. ಮುಂದಿನ ತಿಂಗಳು ತಾ. 10 ರಂದು ಕಚೇರಿ ಉದ್ಘಾಟನೆಯಾಗಲಿದೆ ಎಂದು ಹೇಳಿದರು. ಹಾಗೆಯೇ ಚೆನ್ನರಾಯಪಟ್ಟಣ, ಕೊಡ್ಲಿಪೇಟೆ, ಸೋಮವಾರಪೇಟೆ ಮಡಿಕೇರಿ ಮಾರ್ಗದ ರಸ್ತೆ ವಿಸ್ತರಣಾ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಭಾರತ್ ಸಂಚಾರ್ ನಿಗಮವನ್ನು (ಬಿಎಸ್‍ಎನ್‍ಎಲ್) ಬಲಪಡಿಸುವ ನಿಟ್ಟಿನಲ್ಲಿ ಎಂಜಿನಿಯರ್‍ಗಳು ಮುಂದಾಗಬೇಕು. ಈಗಾಗಲೇ ನಿರ್ಧಾರವಾಗಿರುವ ಸ್ಥಳಗಳಲ್ಲಿ ಟವರ್ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು. ಬಿಎಸ್‍ಎನ್‍ಎಲ್ ದೂರುಗಳಿಗೆ ಸಂಬಂಧಿಸಿದಂತೆ 9480483403 (ಸುಬ್ಬಯ್ಯ) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಉಜ್ವಲ ಯೋಜನೆಯಡಿ 4,723 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ 7 ಮಂದಿ ಅಡುಗೆ ಅನಿಲ ಸಂಪರ್ಕದ ಏಜೆನ್ಸಿಗಳಿದ್ದು, ಸದ್ಯ 1.35 ಲಕ್ಷ ಜನರು ಅಡುಗೆ ಅನಿಲ ಸಂಪರ್ಕ ಪಡೆದಿದ್ದಾರೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಸದಾಶಿವಯ್ಯ ಮಾಹಿತಿ ನೀಡಿದರು. ಸಮಿತಿ ಸದಸ್ಯ ಡಾ.ಬಿ.ಸಿ.ನವೀನ್ ಕುಮಾರ್ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಪ್ರತಿಯೊಬ್ಬರಿಗೂ ಉಚಿತವಾಗಿ ಆರೋಗ್ಯ ಸೇವೆ ಒದಗಿಸಬೇಕಿದೆ ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿದ್ದು, ಅದರಂತೆ ಸೇವೆಯನ್ನು ಒದಗಿಸಬೇಕಿದೆ ಎಂದು ತಿಳಿಸಿದರು. ಪ್ಯಾರಾಮೆಡಿಕಲ್ ಅಧ್ಯಯನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆದಿದ್ದಾರೆ. ಆದರೆ ವಸತಿ ಸೌಲಭ್ಯವಿಲ್ಲದೆ ತೊಂದರೆಯಾಗಿದ್ದು, ಆ ವಿದ್ಯಾರ್ಥಿನಿಯರಿಗೆ ಐಟಿಡಿಪಿ ಅಥವಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯದಲ್ಲಿ ವಸತಿ ಕಲ್ಪಿಸಬೇಕು ಎಂದು ಡಾ.ನವೀನ್ ಕುಮಾರ್ ಅವರು ಗಮನಸೆಳೆದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸರ್ಕಾರ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಿದ್ದು, 20 ದಿನಗಳಲ್ಲಿ ಗುರುತಿನ ಚೀಟಿ ವಿತರಿಸಲಾಗುವದು. ಗುರುತಿನ ಚೀಟಿ ಇಲ್ಲದಿದ್ದರೂ ಸಹ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ತೋರಿಸಿದಲ್ಲಿ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಆಯುಷ್ಮಾನ್ ಭಾರತ ಯೋಜನೆಯಡಿ ಒಂದು ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಆರೋಗ್ಯ ಸೇವೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಮಕ್ಕಳ ಅನುಕೂಲಕ್ಕಾಗಿ ಆರೋಗ್ಯ ಶಿಬಿರ ಏರ್ಪಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಸಲಹೆ ಮಾಡಿದರು. ಸಾಲ ಮನ್ನಾ ಸಂಬಂಧ ಸಂಸದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸರ್ಕಾರದ ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಜಾಗ ನೀಡುವದಿಲ್ಲ ಎಂದು ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರಲ್ಲದೆ ಕೂಡಲೇ ನಿಯಮಗಳನ್ನು ಸಡಿಲಿಸಿ ಜಾಗ ನೀಡುವಂತೆ ಸಲಹೆ ಮಾಡಿದರು. ಜಿ.ಪಂ.ಸಿಇಓ ಕೆ. ಲಕ್ಷ್ಮೀಪ್ರಿಯ, ಸಮಿತಿ ಸದಸ್ಯರು ಹಲವು ವಿಚಾರಗಳ ಬಗ್ಗೆ ಗಮನ ಸೆಳೆದರು. ಅಭಿವೃದ್ಧಿ ಸಮಿತಿ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.