*ಗೋಣಿಕೊಪ್ಪಲು, ನ. 30 : ನಾಗರಹೊಳೆ ವನ್ಯಜೀವಿ ವಿಭಾಗದ 55 ಕುಟುಂಬಗಳ ಗಿರಿಜನರು ತಾವು ಹುಟ್ಟಿ ಬೆಳೆದ ಜಾಗವನ್ನು ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಿ ಎಚ್ ಡಿ ಕೋಟೆ ತಾಲೂಕಿನ ಮಾಚಿಗುಡಿ ಪುನರ್‍ವಸತಿ ಕೇಂದ್ರಕ್ಕೆ ತೆರಳಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದೊಳಗಿನ ಕುಟುಂಬೂರು ಅಡುಗುಂಡಿಯಲ್ಲಿ 75-80 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಬದುಕು ನೂಕುತ್ತಿದ್ದರು. ಕಾಫಿ ತೋಟದ ಕೂಲಿಯನ್ನೇ ಬದುಕಿನ ಆಸರೆಯಾಗಿಸಿಕೊಂಡಿದ್ದ ಇಲ್ಲಿನ ಗಿರಿಜನರು ಗ್ರಾಮ ಪಂಚಾಯಿತಿ ನೀಡುವ ಪ್ಲಾಸ್ಟಿಕ್ ಹೊದಿಕೆಗಳನ್ನು ಮನೆಗಳಿಗೆ ಹೊದಿಸಿಕೊಂಡು ನೆರಳು ಮಾಡಿಕೊಂಡಿದ್ದರು.

ನಾಗರಿಕ ಪ್ರಪಂಚದಿಂದ ದೂರವೇ ಉಳಿದಿದ್ದ ಇಲ್ಲಿನ ಬುಡಕಟ್ಟು ಜನಾಂಗ ವನ್ಯಜೀವಿಗಳ ಭಯದ ನೆರಳಿನಲ್ಲಿಯೇ ದಿನ ದೂಡುತ್ತಿತ್ತು. ಮತ್ತೊಂದು ಕಡೆ ಮಕ್ಕಳ ಶಿಕ್ಷಣಕ್ಕೂ ಸಮಸ್ಯೆಯಾಗಿತ್ತು. ನಾಗರಹೊಳೆ ಅರಣ್ಯ ಹುಲಿ ಸಂರಕ್ಷಣೆ ಕೇಂದ್ರವಾಗಿರುವದರಿಂದ ಜನವಸತಿಗೆ ಸಮಸ್ಯೆ ಎದುರಾಗಿತು. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಅರಣ್ಯವಾಸಿ ಗಿರಿಜನರ ಮನ ಒಲಿಸಿ ಅವರನ್ನು ಪುನರ್ ವಸತಿಗೊಳಿಸಲು ಅರಣ್ಯ ಇಲಾಖೆ ಹಿಂದಿನಿಂದಲೂ ಪ್ರಯತ್ನಿಸುತ್ತಿತ್ತು.

ಇದೀಗ ಎಚ್ ಡಿ ಕೋಟೆ ತಾಲೂಕಿನ ಭೀಮನಹಳ್ಳಿ ಗ್ರಾಮದ ಮಾಚಿಗುಡಿಯಲ್ಲಿ 55 ಆರ್‍ಸಿಸಿ ಮನೆಗಳನ್ನು ನಿರ್ಮಿಸಿ ಒಟ್ಟು ಅಲ್ಲಿ ಎಲ್ಲಾ ಬಗೆಯ ಮೂಲ ಸೌಕರ್ಯವನ್ನು ಒದಗಿಸಿ ಕೊಟ್ಟಿದ್ದಾರೆ. ಹೊಸಮನೆಗೆ ಸೇರಿಸುವಾಗ ಪ್ರತಿ ಕುಟುಂಬಕ್ಕೆ ರೂ. 75 ಸಾವಿರ ಹಣ ನೀಡಿದ್ದಾರೆ. ಜತೆಗೆ 3 ವರ್ಷದವರೆಗೆ ರೂ. 2.25 ಲಕ್ಷ ಹಣವನ್ನು ಸ್ಥಿರನಿಧಿಯಾಗಿ ನೀಡಲಾಗಿದೆ. 3 ವರ್ಷದವರೆಗೆ ಹಣದ ಬಡ್ಡಿಯನ್ನು ಮಾತ್ರ ಪಡೆದುಕೊಳ್ಳಲು ಅವಕಾಶವಿದೆ. ಜೀವನೋಪಾಯಕ್ಕೆ 3 ಎಕರೆ ಕೃಷಿ ಭೂಮಿಯನ್ನು ಒದಗಿಸಿ ಕೊಡಲಾಗಿದೆ. ಈ ಭೂಮಿಯಲ್ಲಿ ಪ್ರತಿ ಕುಟುಂಬಕ್ಕೆ ಕೊಳವೆ ಬಾವಿ ಸೌಲಭ್ಯ ಕಲ್ಪಿಸಲಾಗಿದೆ.

ಈ ಎಲ್ಲಾ ಸೌಲಭ್ಯವನ್ನು ಪಡೆದುಕೊಂಡಿರುವ ಗಿರಿಜನರು ಸಂತೋಷದಿಂದಲೇ ತಾವು ಹುಟ್ಟಿ ಬೆಳೆದ ಗುಡಿಸಲನ್ನು ಕೆಡವಿ ಬಟ್ಟೆ ಬರೆಗಳನ್ನು ಕಟ್ಟಿಕೊಂಡು ಲಾರಿ ಹತ್ತಿ ಪುನರ್‍ವಸತಿ ಕೇಂದ್ರದತ್ತ ಹೆಜ್ಜೆಹಾಕಿದರು.

- ಚಿತ್ರ ವರದಿ ಎನ್.ಎನ್.ದಿನೇಶ್