ಮಡಿಕೇರಿ, ನ.30 :ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಕುಟುಂಬಗಳ ಸ್ವಾಭಿಮಾನದ ಬದುಕಿನ ಹಕ್ಕಿಗಾಗಿ ಮಿಡಿಯುವ ಮತ್ತು ಸ್ಫೂರ್ತಿ ನೀಡುವ ದಿನವನ್ನಾಗಿ ಡಿ.2 ರಂದು 28ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ಆಯೋಜಿಸುವದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಯುವ್ಯ ಕೊಡಗಿನ ಏಳು ನಾಡುಗಳಲ್ಲಿ ಘಟಿಸಿದ ಜಲಸ್ಫೋಟ ಮತ್ತು ಭೂ ಸ್ಫೋಟದಿಂದಾಗಿ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಇವರಲ್ಲಿ ಹೊಸ ಬದುಕಿನ ಸ್ಫೂರ್ತಿ ತುಂಬುವ ಉದ್ದೇಶದಿಂದ ಕೊಡವ ನ್ಯಾಷನಲ್ ಡೇಯನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುವದೆಂದು ತಿಳಿಸಿದರು.

ಕಳೆದ 28 ವರ್ಷಗಳಿಂದ ಕೊಡವರ ಹಕ್ಕಿಗಾಗಿ ಶಾಂತಿಯುತ ಹೋರಾಟವನ್ನು ನಡೆಸುತ್ತಾ ಬಂದಿರುವ ಸಿಎನ್‍ಸಿ ಸಂಘಟನೆ ಇಂದು ಪ್ರಕೃತಿ ವಿಕೋಪದ ಸಂತ್ರಸ್ತರಿಗಾಗಿ ಮಿಡಿಯುವ ಕಾರ್ಯವನ್ನು ಮಾಡುತ್ತಿದೆ. ಘಟನೆ ಸಂಭವಿಸಿ ಮೂರು ತಿಂಗಳುಗಳೇ ಕಳೆದಿದ್ದರು ಸರ್ಕಾರ ಯಾವದೇ ಪರಿಹಾರ ಕಾರ್ಯವನ್ನು ನೈಜ ಕಾಳಜಿಯಿಂದ ಮಾಡುತ್ತಿಲ್ಲ. ಮಂಡ್ಯ ಹಾಗೂ ಹಾಸನ ಭಾಗದ ಮೇಲಿರುವ ಕಾಳಜಿ ಕೊಡಗಿನ ಸಂತ್ರಸ್ತರ ಮೇಲೆ ಇಲ್ಲ. ಸಂತ್ರಸ್ತರ ಪುನಶ್ಚೇತನಕ್ಕಾಗಿ ಸಿಎನ್‍ಸಿ ನಿರಂತರ ಹೋರಾಟ ನಡೆಸಲಿದ್ದು, ಸ್ವಾಭಿಮಾನದ ಬದುಕು ಕಟ್ಟಿಕೊಡುವವರೆಗೆ ಶಾಂತಿಯುತ ಪರಿಶ್ರಮ ಮುಂದುವರಿಯಲಿದೆ ಎಂದರು. ಕೊಡವ ನ್ಯಾಷನಲ್ ಡೇ ಸಂದರ್ಭ ಕೊಡವರ ಹಕ್ಕುಗಳನ್ನು ಮಂಡಿಸಲಾಗುವದು.