ಮಡಿಕೇರಿ, ನ. 30: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಕಷ್ಟ ನಷ್ಟದೊಂದಿಗೆ ಆಸ್ತಿ - ಪಾಸ್ತಿ, ಮನೆ - ಮಠ ಕಳೆದುಕೊಂಡು ಮೂರ್ನಾಲ್ಕು ತಿಂಗಳಿನಿಂದ ತಾಳ್ಮೆಯೊಂದಿಗೆ ಅಗತ್ಯ ಪರಿಹಾರಕ್ಕಾಗಿ ಕಾಯುತ್ತಿರುವ ಜಿಲ್ಲೆಯ ಜನತೆಯ ತಾಳ್ಮೆಯನ್ನು ಇನ್ನು ಪರೀಕ್ಷಿಸದಂತೆ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಹೋರಾಟ ಸಮಿತಿ ಸಂಸದರು ಹಾಗೂ ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ, ರಾಜ್ಯ ಸರಕಾರಗಳಿಗೆ ಸಂದೇಶ ರವಾನಿಸಿದೆ.
ಇಂದು ಕೋಟೆ ವಿಧಾನ ಸಭಾಂಗಣದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಪಿ. ಮನು ಮೇದಪ್ಪ ನೇತೃತ್ವದ ನಿಯೋಗ ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರುಗಳಿಗೆ ಮನವಿ ಸಲ್ಲಿಸಿ, ಪ್ರಾಕೃತಿಕ ಹಾನಿ ಸಂಭವಿಸಿ ಮೂರ್ನಾಲ್ಕು ತಿಂಗಳು ಕಳೆದರೂ ಯಾವದೇ ಪರಿಹಾರ ಕಲ್ಪಿಸಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ. ದೇವಯ್ಯ ನೇತೃತ್ವದ ನಿಯೋಗ ಸಂಸದರಿಗೆ ಈ ಸಂಬಂಧ ಪ್ರತ್ಯೇಕ ಮನವಿ ಸಲ್ಲಿಸಿತು. ಬೆಳೆಗಾರರ ಒಕ್ಕೂಟ ಸಂಚಾಲಕ ಕೆ.ಕೆ. ವಿಶ್ವನಾಥ್, ರವಿ ಕುಶಾಲಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಭಯ ನಿಯೋಗ ತಂಡಗಳಿಂದ ಭಾಗವಹಿಸಿದ್ದರು.