ವೀರಾಜಪೇಟೆ, ನ.30: ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯವರು ನಡೆಸುತ್ತಿರುವ ಧರಣಿ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲೆಯ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಲಿಖಿತ ಭರವಸೆ ಕೊಡುವ ತನಕ ಕದಲುವದಿಲ್ಲ ಎಂದು ಸಂಘಟನೆಯ ರಾಜ್ಯ ಸಮಿತಿಯ ವಿಭಾಗೀಯ ಸಂಚಾಲಕ ಎಚ್.ಎಸ್.ಕೃಷ್ಣಪ್ಪ ಹೇಳಿದರು.
ಮಿನಿ ವಿಧಾನಸೌಧದ ಮುಂದಿನ ಆವರಣದ ಧರಣಿ ಮುಷ್ಕರದ ಸ್ಥಳದಲ್ಲಿ ಮಾತನಾಡಿದ ಕೃಷ್ಣಪ್ಪ ಅವರು ಎರಡು ದಿನಗಳಿಂದ ನಡೆಸುತ್ತಿರುವ ಮುಷ್ಕರದ ಸ್ಥಳಕ್ಕೆ ಯಾವ ಜನಪ್ರತಿನಿಧಿಗಳು ಬಾರದೆ ಮಲತಾಯಿಧೋರಣೆ ತಾಳುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದಲಿತರ ಮೇಲೆ ವಿಶ್ವಾಸ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಇದೇ ಜನಪ್ರತಿನಿಧಿಗಳು ಮತ ಭೇಟೆಗಾಗಿ ದಲಿತರನ್ನು ಹಿಂಬಾಲಿಸುತ್ತಿರುತ್ತಾರೆ. ದಲಿತರಿಗೆ ನಿವೇಶನದೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬ ಆಸಕ್ತಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗಿಲ್ಲ ಧರಣಿ ನಿರತರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ ಎಂದರು.
ಸಂಘಟನೆಯ ಜಿಲ್ಲಾ ಸಮಿತಿಯ ಸಂಚಾಲಕ ಎಚ್.ಆರ್.ಪರಶುರಾಮ್ ಮಾತನಾಡಿ ಉಸ್ತುವಾರಿ ಸಚಿವರಾಗಲಿ, ಇತರ ಜನಪ್ರತಿನಿಧಿಗಳಾಗಲಿ ದಲಿತರ ಮುಷ್ಕರ ನಿರತ ಸ್ಥಳಕ್ಕೆ ಬರಲು ಯಾರದೋ ತಪ್ಪು ತಿಳುವಳಿಕೆಯಿಂದ ಪರೋಕ್ಷವಾಗಿ ಹಿಂದೇಟು ಹಾಕುತ್ತಿದ್ದಾರೆ. ಸಂಘಟನೆ ವಿವಿಧ ಬೇಡಿಕೆಗಳು ಈಡೇರದೆ ಇದ್ದರೆ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವದು. ಇದರ ನಂತರ ಕೊಡಗು ಜಿಲ್ಲಾಧಿಕಾರಿ ಕಚೇರಿಗೂ ಬೀಗ ಜಡಿದು ಪ್ರತಿಭಟನೆ ಮುಂದುವರೆಸಲಾಗವದು ಎಂದು ಹೇಳಿದರು.
ಸಂಘಟನೆಯ ಆಂತರಿಕ ಶಿಸ್ತು ಹಾಗೂ ತರಬೇತಿ ವಿಭಾಗದ ವಿ.ಆರ್.ರಜನಿಕಾಂತ್ ಮಾತನಾಡಿ ಅಧಿಕಾರಿಗಳು, ಜನಪ್ರತಿನಿಧಿಗಳು ದಲಿತರನ್ನು ತುಚ್ಚವಾಗಿ ಕಾಣುತ್ತಿದ್ದಾರೆ. ದಲಿತರು ಭಾರತದ ಪ್ರಜೆಗಳು, ಅವರಿಗೂ ಸಂವಿಧಾನ ಪ್ರಕಾರ ಮೂಲಭೂತ ಹಕ್ಕುಗಳನ್ನು ಒದಗಿಸುವದು ಸರಕಾರ ಹಾಗೂ ಅಧಿಕಾರಿಗಳ ಕರ್ತವ್ಯ ಎಂದು ತಿಳಿದುಕೊಳ್ಳಬೇಕು ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ಎಚ್.ಎನ್.ಕುಮಾರ್ ಮಹಾದೇವ್, ವಿದ್ಯಾರ್ಥಿ ಒಕ್ಕೂಟದ ಸತೀಶ್ ಮತ್ತಿತರರು ಹಾಜರಿದ್ದರು.
ಅನಾರೋಗ್ಯಕ್ಕೀಡಾದ ಮಗು
ಮಿನಿ ವಿಧಾನಸೌಧದ ಮುಂದೆ ಧರಣಿ ಮುಷ್ಕರ ನಿರತ ಪೊನ್ನಂಪೇಟೆಯ ಗಣೇಶ್-ನಂದಿನಿ ದಂಪತಿಯ ಮೂರು ವರ್ಷದ ನಿರ್ಮಲ ಎಂಬ ಮಗು ನಿನ್ನೆ ದಿನ ಮಧ್ಯ ರಾತ್ರಿ ಹಠಾತ್ ಅನಾರೋಗ್ಯಕ್ಕೀಡಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಇಂದು ಬೆಳಿಗ್ಗೆಯೂ ಸರಸ್ವತಿ (12) ಎಂಬ ಬಾಲಕಿ ಅನಾರೋಗ್ಯಕ್ಕೆ ತುತ್ತಾಗಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಗಿರಿಧರ್ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರಲ್ಲದೆ ಆಂಬುಲೆನ್ಸ್ ವಾಹನವನ್ನು ತುರ್ತು ಚಿಕಿತ್ಸೆಗಾಗಿ ಧರಣಿ ಮುಷ್ಕರದ ಸ್ಥಳದಲ್ಲಿಯೇ ನಿಯೋಜಿಸಲಾಗಿದೆ.