ಸುಂಟಿಕೊಪ್ಪ, ನ. 30: ಸಾರಿಗೆ ಇಲಾಖೆಗೆ ತೆರಿಗೆ ಪಾವತಿಸದೆ ಲಾರಿಯಲ್ಲಿ ಆರಣ್ಯ ಅಧಿಕಾರಿಗಳು ನೀಡಿದ ಪರವಾನಗಿಂತ ಅಧಿಕ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಸುಂಟಿಕೊಪ್ಪ ಠಾಣಾಧಿಕಾರಿ ವಶಪಡಿಸಿಕೊಂಡಿದ್ದಾರೆ. ತಾ. 24 ರಂದು ಬೋಯಿಕೇರಿ ಕಡೆಯಿಂದ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು (ಕೆಎ19-7225) ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಗದ್ದೆಹಳ್ಳದ ಬಳಿ ಪರಿಶೀಲಿಸಿದಾಗ ಅರಣ್ಯ ಇಲಾಖೆಯಿಂದ 9990 ಕೆಜಿ ಮರದ ದಿಮ್ಮಿಗಳನ್ನು ಸಾಗಿಸಲು ಅನುಮತಿ ನೀಡಲಾಗಿದ್ದು, ಆದರೆ ಲಾರಿಯಲ್ಲಿ ಹೆಚ್ಚುವರಿಯಾಗಿ 10.435 ತೂಕದ ಮರದ ಕೊರಡುಗಳು ಪತ್ತೆಯಾದವು. ಲಾರಿಯ ದಾಖಲೆಗಳನ್ನು ಪರಿಶೀಲಿಸಿದಾಗ 27 ತಿಂಗಳಿನಿಂದ ಲಾರಿಯ ತೆರಿಗೆ ಕಟ್ಟದೆ ಈ ರೀತಿ ಮರ ಸಾಗಿಸುತ್ತಿರುವದು ಕಂಡು ಬಂದವು ಎಂದು ಠಾಣಾಧಿಕಾರಿ ಜಯರಾಂ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಾರಿಗೆ ಇಲಾಖಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ತೆರಿಗೆ ಕಟ್ಟದ ಖಾಸಗಿ ಬಸ್, ಲಾರಿ ಇತರ ವಾಹನಗಳ ಬಗ್ಗೆ ಸಾರಿಗೆ ಅಧಿಕಾರಿಗಳು ಕ್ರಮಕೈಗೊಂಡರೆ ಹೆಚ್ಚಾಗುತ್ತಿರುವ ತೆರಿಗೆ ಕಳ್ಳತನಕ್ಕೆ ಕಡಿವಾಣ ಹಾಕಬಹುದು; ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ದೊರಕಲಿದೆ ಎಂದು ಪಿಎಸ್‍ಐ ತಿಳಿಸಿದ್ದಾರೆ.