ಮಡಿಕೇರಿ, ನ. 30: ವೈದ್ಯಕೀಯ ಕಾಲೇಜುಗಳು ಆಂಗ್ಲ ಭಾಷೆಗೇ ಹೆಚ್ಚು ಒತ್ತು ಕೊಡುವ ಇಂದಿನ ದಿನದಲ್ಲಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ರಂಗೋಲೆ, ತೋರಣಗಳಿಂದ ಕಟ್ಟಡವನ್ನು ಅಲಂಕರಿಸಿ, ಅಪ್ಪಟ ಕನ್ನಡ ಭಾಷೆಯಲ್ಲಿ ಕಾರ್ಯಕ್ರಮ ಆಯೋಜಿಸಿ, ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿತು.

ಮುಖ್ಯ ಅತಿಥಿ, ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ ಸೂಕ್ತ ಹಾಡುಗಳೊಂದಿಗೆ ಮಾತನಾಡಿ, ತಾಯಿಭಾಷೆಯನ್ನು ಮರೆತರೆ ಹೆತ್ತ ತಾಯಿಯನ್ನೇ ಮರೆತಂತೆ ಎಂದು ಎಚ್ಚರಿಸಿದರು. ಯುವ ಜನತೆ ಕನ್ನಡ ಓದುವದು, ಕವನ- ಕಥೆ ಬರೆಯುವಂತಾಗಲಿ ಎಂದು ಆಶಿಸಿದರು. ನಮ್ಮ ಭಾಷೆ, ನಮ್ಮ ನೆಲದ ಮೇಲೆ ಮಮತೆ ಇರದಿದ್ದರೆ, ಸ್ಪಂದಿಸದಿದ್ದರೆ ಮುಂದೊಂದು ದಿನ ಅಮೇರಿಕಾ ಅಧಿಪತಿಗಳಾಗಿದ್ದ ರೆಡ್ ಇಂಡಿಯನ್ಸ್ ಇಂದು ಮೂಲೆ ಗುಂಪಾಗಿರುವ ಪರಿಸ್ಥಿತಿ ನಮಗೂ ಬಂದೀತು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಮಾತನಾಡಿ, ಜೀವನದಲ್ಲಿ ರಾಗ, ತಾಳ ಸರಿದೂಗಿದರೆ ನೆಮ್ಮದಿ ಎಂದರು. ನಮ್ಮ ಸಂಸ್ಕøತಿಗೆ ಮೂಢ ನಂಬಿಕೆ ಎಂಬ ಹಣೆಪಟ್ಟಿ ನೀಡಿ ಬೆಳವಣಿಗೆ ಕುಂಠಿತವಾಗಿದೆ ಎಂದ ಅವರು, ಸಂಸ್ಕøತಿ ಆಚರಣೆಯಲ್ಲಿ ವೈಜ್ಞಾನಿಕತೆಯೂ ಇದೆ ಎಂದರು.

ಇತ್ತೀಚೆಗೆ ಬೆಹ್ರೇನ್‍ನಲ್ಲಿ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಲೋಕೇಶ್, ಅಲ್ಲಿನ ಅನುಭವ ಹಂಚಿಕೊಂಡರು. ಅಲ್ಲಿನ ಜನಸಂಖ್ಯೆ ಕೇವಲ ಹದಿನೇಳು ಲಕ್ಷ. ಹೊರದೇಶದವರು ಎಂಟು ಲಕ್ಷವಿದ್ದಾರೆ. ನಾಲ್ಕು ಲಕ್ಷ ಭಾರತೀಯರು. ಕೇರಳ, ತಮಿಳುನಾಡು, ಆಂಧ್ರದವರು ಬಹಳವಿದ್ದಾರೆ. ಕರ್ನಾಟಕದವರು ಇಪ್ಪತ್ತಾರು ಸಾವಿರ ಮಂದಿ ಇದ್ದು, ಅದರಲ್ಲಿ ಶೇಖಡಾ ತೊಂಭತ್ತು ಮಂದಿ ವೈದ್ಯರು, ಇಂಜಿನಿಯರ್‍ಗಳು ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಡೀನ್ ಹಾಗೂ ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ ಮಾತನಾಡಿ, ಕಾಲೇಜಿನಲ್ಲಿ ಓದುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಕನ್ನಡ ತರಬೇತಿ ನೀಡುತ್ತಿರುವದಾಗಿ ಹೇಳಿದರು. ತಮ್ಮ ಸಂಸ್ಥೆ ಕನ್ನಡಕ್ಕೆ ಆದ್ಯತೆ ನೀಡುತ್ತಿರುವದಾಗಿ ನುಡಿದರು.

ವಿದ್ಯಾರ್ಥಿ ದರ್ಶನ್ ಸ್ವಾಗತ, ರಾಘವೇಂದ್ರ ಮತ್ತು ಭವ್ಯ ನಿರೂಪಣೆ, ಪ್ರಗತಿ ವಂದನಾರ್ಪಣೆ ಮಾಡಿದರು.