ಶ್ರೀಮಂಗಲ, ಡಿ. 1: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ರಾತ್ರಿ ಧಾಳಿ ನಡೆಸಿರುವ ಪೊಲೀಸರು ಎರಡು ಟಿಪ್ಪರ್ ಹಾಗೂ ಮರಳು ತೆಗೆಯಲು ಬಳಸುತ್ತಿದ್ದ ಪರಿಕರದೊಂದಿಗೆ ನಾಲ್ವರನ್ನು ಬಂಧಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತರ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು ತಲೆ ಮರೆಸಿಕೊಂಡಿದ್ದಾರೆ.

ಹರಿಹರದ ಹರೀಶ್ ಎಂಬವರ ಜಾಗದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಮಾಹಿತಿ ತಿಳಿದು ಧಾಳಿ ನಡೆಸಿದ ಪೊಲೀಸರು ಮರಳು ತುಂಬುತ್ತಿದ್ದ ಬಾಡಗರಕೇರಿಯ ಅಪ್ಪಣ್ಣ ಎಂಬವರಿಗೆ ಸೇರಿದ ಇಚರ್ ಟಿಪ್ಪರ್ (ಕೆಎ 12 ಬಿ 6716) ಹಾಗೂ ಹುದಿಕೇರಿಯ ರಾಜು ಅವರಿಗೆ ಸೇರಿದ ಮತ್ತೊಂದು ಇಚರ್ ಟಿಪ್ಪರ್ (ಕೆಎ 12 ಬಿ 6464) ವಶಪಡಿಸಿಕೊಂಡು ಚಾಲಕರಾದ ಪೊನ್ನಂಪೇಟೆಯ ಎಸ್. ಗುರುದತ್ತ್ ಮತ್ತು ಕುಂದ ಗ್ರಾಮದ ಪಿ.ಯು. ಪೊನ್ನಪ್ಪ ಮತ್ತು ಕೂಲಿ ಕಾರ್ಮಿಕರಾದ ಕೆ.ಕೆ.ಆರ್. ಬಾಡಗರಕೇರಿಯ ವಿನೋದ್ ಮತ್ತು ಹರಿಹರ ಗ್ರಾಮದ ಎಲ್. ಮುತ್ತಣ್ಣ ಎಂಬವರನ್ನು ಬಂಧಿಸಿದ್ದಾರೆ.

ಲಾರಿ ಮಾಲೀಕ ಅಪ್ಪಣ್ಣ, ರಾಜು ಹಾಗೂ ಮರಳು ಗಣಿಗಾರಿಕೆಯ ಸ್ಥಳದ ಮಾಲೀಕ ಹರೀಶ್ ಮೇಲೆ ಪ್ರಕರಣ ದಾಖಲಾಗಿದೆ.

ಈ ಸಂದರ್ಭ ಮರಳು ತೆಗೆಯಲು ಬಳಸುತ್ತಿದ್ದ ಹಲವು ಪರಿಕರಗಳನ್ನು ವಶಪಡಿಸಿಕೊಂಡಿದ್ದು ಬಂಧಿತ ನಾಲ್ವರು ಆರೋಪಿಗಳನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಶ್ರೀಮಂಗಲ ಪೊಲೀಸರು ಮತ್ತು ಜಿಲ್ಲಾ ಅಪರಾದ ವಿಭಾಗದ ಪೊಲೀಸರ ತಂಡ ಧಾಳಿ ನಡೆಸಿತ್ತು.