ಮಡಿಕೇರಿ, ಡಿ.1: ಅಯೋಧ್ಯೆ ಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣವಾಗುವವರೆಗೂ ವಿರಮಿಸದೆ ಹೋರಾಟ ಮಾಡ ಬೇಕೆಂದು ಮಂಗಳೂರು ಗುರುಪುರದ ವಜ್ರದೇಹಿ ಆಶ್ರಮದ ಶ್ರೀ ರಾಜಶೇಖರನಂದ ಸ್ವಾಮೀಜಿ ಹಿಂದೂ ಸಮಾಜಕ್ಕೆ ಕರೆ ನೀಡಿದರು.ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನಾಗ್ರಹ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಅಯೋಧ್ಯೆ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಹಿಂದೂ ಶಕ್ತಿ ಬಲಿಷ್ಠವಾಗಿದೆ. ಹೀಗಿದ್ದೂ ರಾಮನ ಮಂದಿರ ನಿರ್ಮಾಣ ಮಾಡಲಾಗದೆ ನತಮಸ್ತಕರಾಗಿ ಹಿಂದೂಗಳು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವದು ದುರಂತ ಎಂದು ಸ್ವಾಮೀಜಿ ವಿಷಾಧಿಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿಲ್ಲ. ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡ ಬಾರದೆಂದು ಬಾಬರಿ ಮಾನಸಿಕತೆಯ ಮಂದಿ ಕಾನೂನು ಹೋರಾಟಕ್ಕೆ ಮುಂದಾಗಿರುವದೇ ಇದಕ್ಕೆ ಕಾರಣ ಎಂದು ರಾಜಶೇಖರನಂದರು ದೂರಿದರು. ಶಬರಿಮಲೆ ಕ್ಷೇತ್ರದ ವಿಚಾರದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಪ್ರಯತ್ನ ನಡೆಯಿತು. ಶಬರಿಮಲೆ ವಿಚಾರದಲ್ಲಿ ಕೆಲವರ ಬೇಡಿಕೆಗೆ ಮನ್ನಣೆ ಕೊಟ್ಟ ನ್ಯಾಯಾಲಯ ರಾಮ ಮಂದಿರದ ವಿಚಾರದಲ್ಲೇಕೆ ಮೀನಾಮೇಷ ಎಣಿಸುತ್ತಿದೆ ಎಂದು ಪ್ರಶ್ನಿಸಿದರು. ಯಾವದೇ ಧರ್ಮದ ಧಾರ್ಮಿಕ ನಂಬಿಕೆಗೆ ಅಡ್ಡಿ

(ಮೊದಲ ಪುಟದಿಂದ) ಮಾಡಬಾರದೆಂದು ಸಂವಿಧಾನದಲ್ಲೇ ಉಲ್ಲೇಖವಿದೆ. ಹೀಗಿರುವಾಗ ನ್ಯಾಯಾಲಯ ಶಬರಿಮಲೆ ವಿಚಾರದಲ್ಲಿ ಕೈಗೊಂಡ ತೀರ್ಮಾನ ಸಂವಿಧಾನ ವಿರೋಧಿ ಅಲ್ಲವೆ ಎಂದು ಕಿಡಿಕಾರಿದರು. ಟಿಪ್ಪು ಜಯಂತಿ ಆಚರಿಸುವ ಮೂಲಕ ಶಾಂತಿ ಕದಡುವ ಸರ್ಕಾರ ಹಂಪಿ ಉತ್ಸವವನ್ನು ನಿಲ್ಲಿಸುತ್ತದೆ. ಇದರಿಂದ ಸಮಾಜ ಸುಸ್ತಿತಿಯಲ್ಲಿರಲು ಹೇಗೆ ಸಾಧ್ಯ? ಸರ್ಕಾರ ನಡೆಸುವವರು ಸತ್ಯಧರ್ಮಕ್ಕೆ ಗೌರವ ಕೊಡಬೇಕೆಂದ ಸ್ವಾಮೀಜಿ ಹಿಂದೂಗಳ ಒಗ್ಗಟ್ಟಿನ ಮೂಲಕ ರಾಮ ಮಂದಿರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಿಸಿದರು.

ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶ್‍ಪುರ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲೇಬೇಕೆಂದು ಹಿಂದೂ ಸಮಾಜ ಸಂಕಲ್ಪ ತೊಡಬೇಕಿದೆ. ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿ ಮಾಡುವ ಮೂಲಕ ಹಿಂದೂ ಸಮಾಜದ ತಾಳ್ಮೆಯನ್ನು ಕೆಣಕುವ ಪ್ರಯತ್ನಕ್ಕೆ ಯಾರೇ ಮುಂದಾದರೂ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದರು. ಕಸಬ್ ಮನಸ್ಥಿತಿಯವರಿಂದ ಹಿಂದೂಗಳನ್ನು ಧಮನ ಮಾಡುವ ಪ್ರಯತ್ನ ನಡೆಯುತ್ತಿದೆ. ಟಿಪ್ಪು ಜಯಂತಿ ಹೆಸರಿನಲ್ಲಿ ವಿ.ಹಿಂ.ಪ. ಮುಖಂಡ ಕುಟ್ಟಪ್ಪ ಅವರ ಬಲಿ ಪಡೆಯ ಲಾಯಿತು. ಪತ್ರಕರ್ತ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸುವ ಮೂಲಕ ಹಿಂದೂ ಸಮಾಜವನ್ನು ಬೆದರಿಸುವ ಪ್ರಯತ್ನವನ್ನು ಮಾಡಲಾಯಿತು. ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಮುಂದೆ ಏನಾದರೂ ಇಂತಹ ಪ್ರಯತ್ನಗಳು ನಡೆದರೆ ತೀಕ್ಷ್ಣ ಎದಿರೇಟು ನೀಡಬೇಕಾಗುತ್ತದೆ ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಟಾಟಾ ಬೋಪಯ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಚಕ್ಕೇರ ಮನು, ವಿ.ಹಿಂ.ಪ. ಗೌರವಾಧ್ಯಕ್ಷ ಐ.ಎಂ. ಅಪ್ಪಯ್ಯ, ಪ್ರಧಾನ ಕಾರ್ಯದರ್ಶಿ ನರಸಿಂಹ, ತಲಕಾವೇರಿಯ ಆನಂದ ತೀರ್ಥ ಸ್ವಾಮೀಜಿ, ಭಜರಂಗದಳ ಜಿಲ್ಲಾ ಸಂಚಾಲಕ ಚೇತನ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಮೂರು ಬಾರಿ ಓಂಕಾರ ಪಠಣದೊಂದಿಗೆ ಆರಂಭಿಸಲಾಯಿತು.