ಮಡಿಕೇರಿ, ಡಿ. 1: ‘ಕಟ್ಟುವೆವು ಕಟ್ಟುವೆವು.., ರಾಮ ಮಂದಿರ ಕಟ್ಟುವೆವು.., ನಾವೆಲ್ಲ ಹಿಂದೂ-ನಾವೆಲ್ಲ ಒಂದು.., ಅಯೋಧ್ಯೆಯಲ್ಲಿ ರಾಮಮಂದಿರ-ಹಿಂದೂಸ್ಥಾನ್ ಬಲು ಸುಂದರ..,’ ಇವೇ ಮುಂತಾದ ಘೋಷಣೆಗಳು ಮಂಜಿನ ನಗರಿಯಲ್ಲಿ ಮಾರ್ದನಿಸಿದವು.., ರಾಜ ಬೀದಿಯುದ್ಧಕ್ಕೂ ಕೇಸರಿ ವಸ್ತ್ರದೊಂದಿಗೆ ಕೇಸರಿ ಧ್ವಜವನ್ನಿಡಿದ ಹಿಂದೂ ಸಮಾಜ ಬಾಂಧವರು ಬೃಹತ್ ಶೋಭಾಯಾತ್ರೆ ಮೂಲಕ ರಾಮಮಂದಿರ ನಿರ್ಮಾಣದ ಹೋರಾಟಕ್ಕೆ ಚಾಲನೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಯ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಏರ್ಪಡಿಸಲಾಗಿದ್ದ ಜನಾಗ್ರಹ ಸಭೆ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆಯಲ್ಲಿ ತರುಣರು, ವೃದ್ಧರಾದಿಯಾಗಿ ಮಹಿಳೆಯರೂ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಬೃಹತ್ ಶೋಭಾಯಾತ್ರೆಗೆ ಸಾಕ್ಷೀಭೂತರಾದರು.ಕೇಸರಿಮಯ...: ಮಹದೇವಪೇಟೆಯ ಬನ್ನಿ ಮಂಟಪದ ಬಳಿಯಿಂದ ಹೊರಟ ಮೆರವಣಿಗೆಯಲ್ಲಿ ಜಿಲ್ಲೆಯಾದ್ಯಂತ ವಿವಿಧೆಡೆಗಳಿಂದ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ನಂತರ ಆರಂಭವಾದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಹಿಂದೂ ಕಾರ್ಯಕರ್ತರು ತಂಡೋಪತಂಡವಾಗಿ ಬಂದು ಸೇರಿಕೊಂಡರು. ಬಹುತೇಕ ಮಂದಿ ಕೇಸರಿ ಉಡುಪಿನಲ್ಲಿದ್ದರೆ, ಇನ್ನುಳಿದವರು ಕೇಸರಿ ಶಾಲ್, ರಿಬ್ಬನ್ಗಳನ್ನು ಧರಿಸಿ ಕೈಯಲ್ಲಿ ಕೇಸರಿ ಧ್ವಜ ಹಿಡಿದಿದ್ದರು. ರಾಜಮಾರ್ಗವಿಡೀ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿತ್ತು.ಮಂಟಪಗಳ ಮೆರುಗುಈ ಬಾರಿಯ ಶೋಭಾಯಾತ್ರೆಗೆ ಮಂಟಪಗಳು ವಿಶೇಷ ಮೆರುಗು ನೀಡಿದವು. ಮೆರವಣಿಗೆಯ ಮುಂಚೂಣಿಯಲ್ಲಿ ಶ್ರೀರಾಮನ ಪ್ರತಿರೂಪವಿದ್ದ ಮಂಟಪ ಸಾಗಿ ಬಂದರೆ, (ಮೊದಲ ಪುಟದಿಂದ) ಜೊತೆ ಜೊತೆಯಲ್ಲಿ ಆಂಜನೇಯ, ಗಣಪತಿ, ದೇವಿ, ಅಗಸ್ತ್ಯಮುನಿ ಸೇರಿದಂತೆ ವಿವಿಧ ದೇವಾನು ದೇವತೆಗಳ ಪ್ರತಿರೂಪ ಹೊತ್ತಿದ್ದ ಮಂಟಪಗಳು ಸಾಗಿ ಬಂದವು. ಕೆಲವೊಂದು ಮಂಟಪಗಳಲ್ಲಿ ಕಲಾಕೃತಿಗಳ ಚಲನ-ವಲನ, ಧ್ವನಿವರ್ಧಕಗಳೂ ಇದ್ದವು.
ಮಡಿಕೇರಿ ದಸರಾದಲ್ಲಿ ಉತ್ಸವ ಮಂಟಪ ಹೊರಡಿಸುವ ದಶ ಮಂಟಪಗಳ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಹಾಗಣಪತಿ, ಚೌಡೇಶ್ವರಿ, ಕೋದಂಡರಾಮ, ದೇಚೂರು ರಾಮಮಂದಿರ, ಕರವಲೆ ಭಗವತಿ ದೇವಾಲಯಗಳ ಮಂಟಪಗಳು ಸೇರಿದಂತೆ ನಗರದ ಕಾವೇರಿ ಭಕ್ತಮಂಡಳಿ, ಶಾಂತಿನಿಕೇತನ ಯುವಕ ಸಂಘ, ಮಡಿವಾಳರ ಸಂಘ, ಹಿಂ.ಜಾ.ವೇ. ಮಾದಾಪುರ, ಮಕ್ಕಂದೂರಿನ ವಿ.ಹಿಂ.ಪ. ಭಜರಂಗದಳ ಸಮಿತಿ, ಮದೆನಾಡಿನ ಹಿಂ.ಜಾ.ವೇ. ಮಡಿಕೇರಿಯ ಛತ್ರಪತಿ ಘಟಕ, ಕೊಯನಾಡಿನ ವಿ.ಹಿಂ.ಪ., ಹೆರವನಾಡು-ಉಡೋತ್ಮೊಟ್ಟೆಯ ವಿ.ಹಿಂ.ಪ. ಭಜರಂಗದಳ ಸಮಿತಿಯ ಮಂಟಪಗಳೊಂದಿಗೆ ಆಯಾ ಊರಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗಣ್ಯರ ಸಾಥ್: ಮೆರವಣಿಗೆಗೆ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಸಾಥ್ ನೀಡಿದರು. ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್ ಸೇರಿದಂತೆ ಜಿ.ಪಂ., ತಾ.ಪಂ., ನಗರಸಭೆ, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.
ಪೊಲೀಸ್ ಬಂದೋಬಸ್ತ್
ಮೆರವಣಿಗೆ ಸುಸೂತ್ರವಾಗಿ ನಡೆಯುವದರೊಂದಿಗೆ ಯಾವದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಸ್ವತಃ ಉಸ್ತುವಾರಿ ವಹಿಸಿಕೊಂಡಿದ್ದರು. ಕೆಎಸ್ಆರ್ಪಿ, ಸಿಆರ್ಪಿಎಫ್ ತುಕಡಿಗಳೊಂದಿಗೆ ರ್ಯಾಪಿಡ್ ಆ್ಯಕ್ಷನ್ ಪೋರ್ಸ್ ಸೇರಿದಂತೆ ಒಟ್ಟು 600 ಮಂದಿ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.
ನಗರದ ಪ್ರಮುಖ ಬೀದಿಗಳಲ್ಲಿ, ಕೂಡು ರಸ್ತೆಗಳಲ್ಲಿ, ಚೆಕ್ಪೋಸ್ಟ್ಗಳನ್ನು ನಿರ್ಮಿಸಿ, ಮೆರವಣಿಗೆ ತೆರಳುವ ಹಾದಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಬೃಹತ್ ಮೆರವಣಿಗೆ ಹಾದು ಹೋಗುತ್ತಿರುವಂತೆ ರಸ್ತೆಯ ಇಕ್ಕೆಲಗಳಲ್ಲಿ, ಮನೆ, ಕಟ್ಟಡಗಳ ಮೇಲೆ ಸಾರ್ವಜನಿಕರು ಗುಂಪುಗೂಡಿ ಮೆರವಣಿಗೆಯನ್ನು ವೀಕ್ಷಿಸುವದರೊಂದಿಗೆ ಫೋಟೋ, ವಿಡಿಯೋ ತೆಗೆಯುತ್ತಿದ್ದುದು ಗೋಚರಿಸಿತು.
ಬನ್ನಿಮಂಟಪದಿಂದ ಹೊರಟ ಮೆರವಣಿಗೆ, ಬಸ್ ನಿಲ್ದಾಣ ಮೂಲಕ ಹಾದು ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ತೆರಳಿ ಗಾಂಧಿ ಮೈದಾನದಲ್ಲಿ ಸಂಪನ್ನಗೊಂಡಿತು. ಆ ಬಳಿಕ ಗಾಂಧಿ ಮೈದಾನದ ಬೃಹತ್ ವೇದಿಕೆಯಲ್ಲಿ ಜನಾಗ್ರಹ ಸಭೆ ನೆರವೇರಿತು,.