ಸಿದ್ದಾಪುರ, ಡಿ. 1: ಕೊಡಗು ಎಸ್.ಎನ್.ಡಿ.ಪಿ. ಯೂನಿಯನ್ ಅಧೀನದಲ್ಲಿರುವ, ಮೈಸೂರು ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಿಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ ಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚಾರಿಟೇಬಲ್ ಟ್ರಸ್ಟಿ ಕೆ.ಜಿ. ಮನೋಜ್ ಮಾತನಾಡಿ ಈ ಬಾರಿಯ ಮಹಾ ಮಳೆಗೆ ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿರುವದು ದುಃಖಕರವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಿಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೇರಳದ ಸಂಕಷ್ಟಕ್ಕೆ ಸ್ಪಂದಿಸಿ ಕೇರಳದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ. ಐವತ್ತು ಸಾವಿರ ನೀಡಲಾಗಿದ್ದು, ಇದೀಗ ಕೊಡಗು ಜಿಲ್ಲೆಯ ಹತ್ತು ಮಂದಿ ನೆರೆ ಸಂತ್ರಸ್ತರಿಗೆ ರೂ. ಐವತ್ತು ಸಾವಿರ ಮೊತ್ತವನ್ನು ನೀಡಲಾಗಿದೆಂದರು.

ಮೈಸೂರು ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಿಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಮಹಾ ಮಳೆಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದವರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆಯ ವತಿಯಿಂದ ಆಹಾರ ಹಾಗೂ ದಿನ ಬಳಕೆಯ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಸಂಘಟನೆಯು ಸಮಾಜ ಬಾಂಧವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಂಘಟನೆಯ ಉತ್ತಮ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕೇ ಹೊರತು ಅನಗತ್ಯ ಟೀಕೆಗಳಿಗೆ ಸಮಾಜ ಬಾಂಧವರು ಕಿವಿಗೊಡಬೇಡಿ ಎಂದು ಸಲಹೆ ನೀಡಿದರು.

ಕೊಡಗು ಎಸ್.ಎನ್.ಡಿ.ಪಿ. ಯೂನಿಯನ್ ಸಂಚಾಲಕ ಕೆ. ಎನ್ ವಾಸು ಮಾತನಾಡಿ ಸಂಘಟನೆಯ ವತಿಯಿಂದ ಈ ಹಿಂದೆ ಜಿಲ್ಲೆಯ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ ಸಹಾಯ ಧನ ನೀಡಲಾಗಿದೆ. ಸಂಘಟನೆಯು ಸಮಾಜ ಬಾಂಧವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅನಾರೋಗದಿಂದ ಬಳಲುತ್ತಿರುವವರ ಚಿಕಿತ್ಸೆಗೆ ಸ್ಪಂದಿಸಿದೆ. ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೂ ಕೂಡ ಪ್ರೋತ್ಸಾಹ ನೀಡಿದೆ.ಸಂಘಟನೆಯು ಜಾತಿ, ಭೇದ ಮರೆತು ಪಕ್ಷಾತೀತವಾಗಿ ನಿರ್ಗತಿಕರ ಕಷ್ಟಗಳಿಗೆ ಸ್ಪಂದಿಸಿ ನೆರವು ನೀಡುತ್ತಿದೆ ಎಂದರು. ಕಾರ್ಯಕ್ರಮ ದಲ್ಲಿ ಮೈಸೂರು ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಿಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಯೂನಿಯನ್ ಅಧ್ಯಕ್ಷ ಕೆ. ಬಾಲಕೃಷ್ಣ, ಪದಾಧಿಕಾರಿ ಗಳಾದ ಸೂರ್ಯ ನಾರಾಯಣ, ಮಿಟ್ಟು, ಕಿಶೋರ್, ಕೆ.ವಾಸು, ಟಿ.ಸಿ, ಅಶೋಕ್ ಇನ್ನಿತರರು ಹಾಜರಿದ್ದರು.