ಗೋಣಿಕೊಪ್ಪಲು, ಡಿ.1: ಕೊಡವ ಐರಿ ಸಮಾಜದ 8ನೇ ಮಹಾಸಭೆಯು ಮೂರ್ನಾಡು ಗೌಡ ಸಮಾಜದಲ್ಲಿ ಇತ್ತೀಚೆಗೆ ನಡೆದು ರಾಜ್ಯದ ಸರ್ಕಾರಿ ಸ್ವಾಮ್ಯದ ದೃಶ್ಯವಾಹಿನಿಯೊಂದರಲ್ಲಿ ಪ್ರಸಾರವಾದ ಧಾರಾವಾಹಿವೊಂದರಲ್ಲಿ ಕೊಡವ ಐರಿ ಸಮಾಜದ ವಿರುದ್ಧ ಜನಾಂಗೀಯ ನಿಂದನೆಯೊಂದಿಗೆ, ಕೀಳಾಗಿ ಬಿಂಬಿಸಿದ್ದು ಈ ಬಗ್ಗೆ ಕಾನೂನು ಹೋರಾಟಕ್ಕೆ ಸಭೆಯಲ್ಲಿ ಸರ್ವಾನುಮತದ ಬೆಂಬಲ ವ್ಯಕ್ತವಾಯಿತು. ಐರಿ ಸಮಾಜವನ್ನು ಸಾಂಸ್ಕøತಿಕವಾಗಿಯೂ ತುಳಿಯ ಲಾಗುತ್ತಿದೆ ಎಂದೂ ಆಕ್ರೋಶ ವ್ಯಕ್ತಗೊಂಡಿತು.

ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಾಜದ ಉಪಾಧ್ಯಕ್ಷೆ, ಮಾಜಿ ಜಿ.ಪಂ.ಸದಸ್ಯೆ ಬಬ್ಬೀರ ಸರಸ್ವತಿ ಅವರು, ಐರಿ ಸಮಾಜದ ಬಗ್ಗೆ ಟಿವಿ ಧಾರಾವಾಹಿ ಯಲ್ಲಿ ಅವಹೇಳನಕಾರಿಯಾಗಿ ಬಿಂಬಿಸಿದ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಚಿತ್ರದ ನಿರ್ದೇಶಕ ಹಾಗೂ ಪ್ರಮುಖ ನಟಿಯ ವಿರುದ್ಧ ಕಾನೂನು ಹೋರಾಟ ಮಾಡಲಾಗುತ್ತಿದೆ. ಇದೀಗ ಅವರುಗಳು ರಾಜೀ ತೀರ್ಮಾನಕ್ಕೆ ಮುಂದಾಗಿದ್ದು ಸಭೆಯ ಒಪ್ಪಿಗೆ ಮೇರೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವದು ಎಂದು ವಿವರಣೆ ನೀಡಿದ ಸಂದರ್ಭ ಐರಿ ಸಮಾಜದ ಸರ್ವ ಸದಸ್ಯರು ‘ಯಾವದೇ ಕಾರಣಕ್ಕೆ ರಾಜಿ ಬೇಡ ಎಂದರು.

18 ಮೂಲ ನಿವಾಸಿಗಳ ಕೊಡವ ಭಾಷಿಕರ ಸಾಂಸ್ಕøತಿಕ ಕೂಟದ ‘ಕೋರ್ ಕಮಿಟಿ’ಗೆ ಐರಿ ಸಮಾಜದ ಹೆಸರು ಕೇಳುತ್ತಿದ್ದಾರೆ. 18 ಮೂಲನಿವಾಸಿಗಳ ಸಮಿತಿಗೆ ಎಲ್ಲ ಜನಾಂಗಕ್ಕೂ ಸಮಾನ ಅವಕಾಶ ನೀಡುವದು ಅಗತ್ಯ. ಆದರೆ ಪ್ರಮುಖ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಮೂಲಕ ಇತರ ಜನಾಂಗಕ್ಕೆ ಅನ್ಯಾಯ ಮಾಡಲಾಗಿದೆ. ಇಂತಹಾ ಭಾಷಿಕರ ಕೂಟ ಬೇಕೆ ಎಂದು ಅವರು ಪ್ರಶ್ನಿಸಿದರು. ಐರಿ ಸಮಾಜದ ಪ್ರಮುಖರಿಗೆ ಗೌರವಾಧ್ಯಕ್ಷರ ಸ್ಥಾನಮಾನವಾದರೂ ನೀಡಬಹುದಿತ್ತು ಎಂದು ಈ ಸಂದರ್ಭ ಚರ್ಚೆಯಾಯಿತು.

ಕೋವಿ ಹಕ್ಕು ಮೊದಲಿಗೆ ಐರಿ ಸಮಾಜಕ್ಕೆ ನೀಡಲಾಗಿದೆ. ಪೀಚೆಕತ್ತಿ, ಒಡಿಕತ್ತಿ,ಪತ್ತಾಕು ಮೂಲ ಸಂಸ್ಕøತಿ ಐರಿ ಸಮಾಜದ್ದು. ಆದರೆ, ಮುಗ್ಧ ಐರಿ ಸಮಾಜದ ಜನಾಂಗವನ್ನು ಸಾಂಸ್ಕೃತಿಕವಾಗಿಯೂ ತುಳಿಯುವ ಯತ್ನ ಒಂದು ವರ್ಗ ಮಾಡುತ್ತಾ ಬಂದಿದೆ. ಐನ್‍ಮನೆಯ ಮೂಲ ಸಂಸ್ಕೃತಿಯೂ ನಮ್ಮದೆ ಕೊಡುಗೆ. ನಮ್ಮ ಕೋವಿ ಹಕ್ಕನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಜಮ್ಮಾ ವಿನಾಯಿತಿ ನಮಗೂ ಇದೆ ಎಂದು ಬಬ್ಬೀರ ಸರಸ್ವತಿ ಹೇಳಿದರು. ಕೊಡವ ಮೂಲ ಸಂಸ್ಕೃತಿಯಲ್ಲಿ ಐರಿ ಸಮಾಜದ ಕೊಡುಗೆಯೂ ಅಪಾರವಾಗಿದೆ. ಈ ನಿಟ್ಟಿನಲ್ಲಿ ಇನ್ನು ತುಳಿತಕ್ಕೆ ಒಳಗಾಗದೆ ಹೋರಾಟ ಅನಿವಾರ್ಯವಾಗಿದೆ. ತಾರತಮ್ಯ ಧೋರಣೆಗೆ ಇನ್ನು ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟರು.

ಐರಿ ಕ್ರೀಡೋತ್ಸವ ರದ್ಧತಿ ಇಲ್ಲ

ಜಿಲ್ಲೆಯಲ್ಲಿ ಉಂಟಾದ ಜಲಪ್ರಳಯದಲ್ಲಿ ಐರಿ ಸಮುದಾಯಕ್ಕೆ ಹೆಚ್ಚಿನ ನಷ್ಟ ಹಾನಿ ಆಗಿಲ್ಲ. ಈ ನಿಟ್ಟಿನಲ್ಲಿ ಕೊಡವ ಐರಿ ಕ್ರೀಡೋತ್ಸವ ರದ್ದು ಮಾಡದಂತೆ ಹಲವು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಇದೇ ಸಂದರ್ಭ ಮಾತನಾಡಿದ ಅಧ್ಯಕ್ಷ ಮೇಲತಂಡ ರಮೇಶ್ ಅವರು, 2019ರ ಕ್ರಿಕೆಟ್ ಉತ್ಸವದ ಆತಿಥ್ಯವನ್ನು ಕೆದಮುಳ್ಳೂರುವಿನ ಮುಲ್ಲೈರೀರ ಕುಟುಂಬಕ್ಕೆ ವಹಿಸಲಾಗಿತ್ತು, ಧ್ವಜವನ್ನೂ ಹಸ್ತಾಂತರಿಸಲಾಗಿತ್ತು. ಇದೀಗ ಆರ್ಥಿಕ ಸಂಕಷ್ಟದ ಹಿನ್ನೆಲೆ 2020ಕ್ಕೆ ನಡೆಸಲು ಅವಕಾಶ ಕೇಳಿದ್ದಾರೆ ಎಂದು ಸಭೆಗೆ ತಿಳಿಸಿದಾಗ, ಐರೀರ ರೂಪೇಶ್ ನಾಣಯ್ಯ ಅವರು ಯಾವದೇ ಕಾರಣಕ್ಕೂ ಕ್ರೀಡೋತ್ಸವ ರದ್ಧತಿ ಬೇಡ. ನಾವೂ ಬೇಕಿದ್ದರೆ ಸಹಕಾರ ನೀಡುತ್ತೇವೆ. ಸರಳವಾಗಿಯಾದರೂ ಈ ಬಾರಿ ಕ್ರೀಡಾ ಹಬ್ಬ ನಡೆಯಲಿ ಎಂದು ಒತ್ತಾಯಿಸಿದರು.

ಇದೇ ಸಂದರ್ಭ ಮಾತನಾಡಿದ ಕುಟುಂಬ ಹಿರಿಯರಾದ ಮುಲ್ಲೈರೀರ ಮುತ್ತಪ್ಪ ಅವರು, ಇಲ್ಲಿ ನಮ್ಮ ಕುಟುಂಬಸ್ಥರು ಎಲ್ಲರೂ ಬರಲಿಲ್ಲ. ಕ್ರೀಡಾಕೂಟ ನಡೆಸಲೇಬೇಕೆಂದಾದಲ್ಲಿ ಮತ್ತೆ ನಮ್ಮ ಕುಟುಂಬ ಸದಸ್ಯರನ್ನು ಸೇರಿಸಿ, ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದ ಸಂದರ್ಭ ಮುಂದಿನ 15 ದಿನಗಳ ಕಾಲಾವಕಾಶವನ್ನು ಸಭೆಯಲ್ಲಿ ನೀಡಲಾಯಿತು.

ಐರಿ ಆಟ್ ಪಾಟ್ ಪಡಿಪು ಕಾರ್ಯಕ್ರಮ

ಕೊಡವ ಅಕಾಡೆಮಿ ಸದಸ್ಯೆ ಕಾಂಗೀರ ಕುಸುಮ ಅವರು ಮಾತನಾಡಿ, ಯಾವದೇ ಐರಿ ಕುಟುಂಬ ಮುಂದೆ ಬಂದಲ್ಲಿ ಮನೆ ಮನೆಯಲ್ಲಿ ಐರಿ ಆಟ್ ಪಾಟ್ ಪಡಿಪು ಕಾರ್ಯಕ್ರಮವನ್ನು ಕೊಡವ ಐರಿ ಸಮಾಜ, ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆಸಬಹುದಾಗಿದೆ. ಅಕಾಡೆಮಿಯು ಕಾರ್ಯಕ್ರಮಕ್ಕೆ ಆರ್ಥಿಕ ನೆರವನ್ನೂ ಒದಗಿಸಲಿದೆ ಎಂದು ಮಾಹಿತಿ ನೀಡಿದರು. ಐರಿ ಸಮಾಜದಲ್ಲಿ ಸುಮಾರು 866 ಮಂದಿ ಸದಸ್ಯರಾಗಿದ್ದು, ಮಹಾಸಭೆಗೆ ಕಡಿಮೆ ಸಂಖ್ಯೆಯಲ್ಲಿ ಹಾಜರಾದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಐರಿ ಸಮಾಜದ ಸಾಧಕಿ ಶಿಲ್ಪಿ ಮುತ್ತಣ್ಣನವರ ಹೆಸರಿನಲ್ಲಿ ಕುಂಜಿಲಗೇರಿ, ಮೂರ್ನಾಡು ಅಥವಾ ಮರಗೋಡುವಿನಲ್ಲಿಯೂ ಅಕಾಡೆಮಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲು ಅವಕಾಶವಿದೆ ಎಂದು ಕುಸುಮ ಮಾಹಿತಿ ನೀಡಿದರು.

ಮೂರ್ನಾಡುವಿನಲ್ಲಿರುವ ಐರಿ ಸಮಾಜದ ನಿವೇಶನವನ್ನು ಮಾರಾಟ ಮಾಡಿ, ಬಿಟ್ಟಂಗಾಲದಲ್ಲಿ ಸಮಾಜದ ಕಟ್ಟಡಕ್ಕೆ ಸುಮಾರು ರೂ. 50 ಲಕ್ಷ ವೆಚ್ಚದಲ್ಲಿ ನಿವೇಶನ ಖರೀದಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು.

ಅಧ್ಯಕ್ಷ ಮೇಲತಂಡ ರಮೇಶ್ ಅವರು ಮಾತನಾಡಿ, ಪ್ರೀತಿ, ವಿಶ್ವಾಸ ಹಾಗೂ ಸಮಾಜದ ಬಾಂಧವ್ಯ ವೃದ್ಧಿಗಾಗಿ ಐರಿ ಸಮಾಜ ಸ್ಥಾಪನೆ ಮಾಡಲಾಗಿದೆ. ವರ್ಷಕ್ಕೊಮ್ಮೆಯಾದರೂ ಎಲ್ಲರೂ ಒಗ್ಗೂಡಬೇಕಾಗಿದೆ. ಜಿಲ್ಲೆಯಲ್ಲಿ ಸುಮಾರು

15 ಸಾವಿರ ಐರಿ ಜನಸಂಖ್ಯೆ ಇದ್ದು, ಸಮಾಜದ ಕಾರ್ಯಕ್ರಮದಲ್ಲಿ ನಿರ್ಲಕ್ಷ್ಯ ತೋರದೆ ಎಲ್ಲರೂ ಭಾಗವಹಿಸಬೇಕು ಎಂದು ಕರೆನೀಡಿದರು.

ಐರಿ ಸಮಾಜದ ಸಮಗ್ರ ಮಾಹಿತಿ, ಗಣತಿ ಕಲೆಹಾಕಲು ಮುಂದಿನ ದಿನಗಳಲ್ಲಿ ‘ವೆಬ್‍ಸೈಟ್’ ಆರಂಭಿಸುವ ಬಗ್ಗೆಯೂ ಚರ್ಚೆ ನಡೆಯಿತು. ಆಯಾಯ ಗ್ರಾಮದ ಐರಿ ಜನಾಂಗ ಗಣತಿಗೆ ನೆರವಾಗಲು ಇದೇ ಸಂದರ್ಭ ಮನವಿ ಮಾಡಲಾಯಿತು.

ಸಭೆಯಲ್ಲಿ ಕಳೆದ ಬಾರಿಯ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕಾಮೇಯಂಡ ಗಣೇಶ್ ಓದಿದರು. ಸಭೆಯಲ್ಲಿ 10ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ಐರೀರ ಯುಕ್ತಶ್ರೀ ಐಯಣ್ಣ (ಶೇ.95.84), ಅಪ್ಪಚಂಡ ಸುಶ್ಮಿತಾ (ಶೇ.94.24) ಹಾಗೂ ದ್ವಿತೀಯ ಪಿಯುಸಿಯಲ್ಲಿ ಪೆÇನ್ನೀರ ಅರ್ಜುನ್ ಕಾವೇರಪ್ಪ (87.66), ಐಮಂಡ ಕುಶ್ಮಿತಾ (78.33) ರವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ರಾಜ್ಯ ಗುಪ್ತವಾರ್ತೆ ವಿಭಾಗದ ನಿವೃತ್ತ ಡಿವೈಎಸ್‍ಪಿ ತಟ್ಟಂಡ ಕುಶಾಲಪ್ಪ, ನಿವೃತ್ತ ಪೆÇಲೀಸ್ ನಿರೀಕ್ಷಕ ಎ.ಎ.ಅಪ್ಪಣ್ಣ, ನಿರ್ದೇಶಕರಾದ ಆಂಗೀರ ಸುರೇಶ್ ಸುಬ್ರಮಣಿ, ಅಪ್ಪಚಂಡ ಕುಶಾಲಪ್ಪ, ಎ.ಎ.ಹರಿಶ್ಚಂದ್ರ, ಮುಡಿಯಂಡ ಭೀಮಯ್ಯ, ಪಟ್ಟಚಾರೀರ ದಿನೇಶ್ ಕಾವೇರಪ್ಪ, ಪೆÇನ್ನೀರ ಪೂವಮ್ಮ, ಐಮಂಡ ಸುಧಾ, ಅಮ್ಮಣಂಡ ಪೂಣಚ್ಚ, ಐರೀರ ಅಯ್ಯಪ್ಪ. ಐರೀರ ಬೋಪಯ್ಯ ಹಾಗೂ ಐರೀರ ಸುಬ್ರಮಣಿ ಉಪಸ್ಥಿತರಿದ್ದರು. ಖಜಾಂಚಿ ಕುಮಾರ್ ದೇವಯ್ಯ ವಂದಿಸಿದರು.

- ವರದಿ: ಟಿ.ಎಲ್.ಶ್ರೀನಿವಾಸ್