ಮಡಿಕೇರಿ, ಡಿ. 1: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಡಿಕೇರಿ ನಗರದ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯದ ಸಹಯೋಗದೊಂದಿಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ 26 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2018 ದಲ್ಲಿ ಕಿರಿಯ ವಿಜ್ಞಾನಿಗಳು ಮಂಡಿಸಿದ ವೈಜ್ಞಾನಿಕ ಯೋಜನಾ ಪ್ರಬಂಧ ಸ್ಪರ್ಧೆ ಗಮನ ಸೆಳೆಯಿತು.

ಸಮಾವೇಶದ ಕೇಂದ್ರ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಉಪ ವಿಷಯಗಳ ಕುರಿತು ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ತಂಡದಲ್ಲಿ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ರಚಿಸಿದ ವೈಜ್ಞಾನಿಕ ಯೋಜನೆಗಳನ್ನು ಉತ್ತಮವಾಗಿ ಮಂಡಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

“ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು” ಎಂಬ ಕೇಂದ್ರ ವಿಷಯದಡಿ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳ ತಂಡವು ತಮ್ಮ ಶಾಲಾ ವ್ಯಾಪ್ತಿಯ ಪರಿಸರದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸ್ವತಃ ಸಮೀಕ್ಷೆ ಕೈಗೊಂಡು ಸಂಶೋಧಿಸಿ, ವಿಶ್ಲೇಷಿಸಿ ರೂಪಿಸಿದ್ದ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡನೆಯು ಹಿರಿಯ ವಿಜ್ಞಾನಿಗಳ ಮಾದರಿಯಲ್ಲಿ ಪ್ರದರ್ಶಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಸಮಾವೇಶದ ಕೇಂದ್ರ ವಿಷಯದಡಿ ಆರೋಗ್ಯ, ಸ್ವಚ್ಛತೆ ಮತ್ತು ಪೋಷಣೆ, ಪರಿಸರ ವ್ಯವಸ್ಥೆಗಳು, ಜೀವಿ ಪರಿಸರ ಮತ್ತು ಪರಿಸರ ಸೇವೆಗಳು, ಆರೋಗ್ಯ, ನೈರ್ಮಲ್ಯ ಮತ್ತು ಸ್ವಸ್ಥ್ಯ ಪರಿಪಾಲನೆ, ತ್ಯಾಜ್ಯದಿಂದ ಸಂಪತ್ತು, ಸಮಾಜ, ಸಂಸ್ಕøತಿ ಮತ್ತು ಜೀವನೋಪಾಯ ಹಾಗೂ ಸಾಂಪ್ರ ದಾಯಿಕ ಜ್ಞಾನ ವ್ಯವಸ್ಥೆ ಇತ್ಯಾದಿ ಕಾರ್ಯ ಮತ್ತು ಚಟುವಟಿಕೆಗಳು ಮುಂತಾದ ಉಪ ವಿಷಯಗಳ ಕುರಿತು ತಮ್ಮ ಪ್ರಯೋಗಗಳ ಮೂಲಕ ತಮ್ಮ ಶಾಲೆಯ ಸುತ್ತಮುತ್ತ ಸಮೀಕ್ಷೆ ಮೂಲಕ ಸಿದ್ಧಪಡಿಸಿದ ವೈಜ್ಞಾನಿಕ ಯೋಜನಾ ಪ್ರಬಂಧವನ್ನು ಬಾಲ ವಿಜ್ಞಾನಿಗಳು ಮಂಡಿಸಿದರು.

ಮಕ್ಕಳಲ್ಲಿ ಸೃಜನಶೀಲತೆ, ನವೀನತೆ ಮತ್ತು ಕ್ರಿಯಾಶೀಲತೆ ಬೆಳೆಸುವ ಮೂಲಕ ಅವರು ತಮ್ಮ ಸುತ್ತಲಿನ ಸಮಸ್ಯೆಗಳನ್ನು ಗುರುತಿಸಿ ಮಾಹಿತಿ ಕಲೆಹಾಕಿ ವಿಶ್ಲೇಷಿಸುವ ಮೂಲಕ ಸ್ವತಃ ತಾವೇ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಾವೇಶ ಸಹಕಾರಿಯಾಗಿದೆ ಎಂದರು.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಭವಿಷ್ಯದ ವಿಜ್ಞಾನಿ ಗಳನ್ನಾಗಿ ರೂಪಿಸಲು ಸಹಕಾರಿ ಯಾಗಿದ್ದು, ಮಕ್ಕಳಲ್ಲಿ ಮೂಲ ವಿಜ್ಞಾನ ವಿಷಯದಲ್ಲಿ ಆಸಕ್ತಿ, ಕುತೂಹಲ, ಸಂಶೋಧನಾ ಪ್ರವೃತ್ತಿ ಬೆಳೆಸಲು ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದು ಕಾರ್ಯಕ್ರಮದ ಸಂಘಟಕರೂ ಆದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ ತಿಳಿಸಿದರು.