ಮಡಿಕೇರಿ, ಡಿ. 1: ಶತಮಾನಗಳ ಇತಿಹಾಸವಿರುವ ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯ ಎದುರಿನ, ಕೊಡಗು ದೇವಾಲಯ ನಿಧಿ ಕಚೇರಿಯ ಹಳೆಯ ಕಟ್ಟಡವನ್ನು ದಿಢೀರ್ ತೆರವುಗೊಳಿಸಿರುವ ಬಗ್ಗೆ ಜನವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಗೊಂಡಿದೆ. ಅಲ್ಲದೆ ಐತಿಹಾಸಿಕ ಕಟ್ಟಡವನ್ನು ಏಕಪಕ್ಷೀಯವಾಗಿ ತೆರವು ಗೊಳಿಸಿರುವದು ಸರಿಯಲ್ಲವೆಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.ಕೊಡಗು ದೇವಾಲಯ ನಿಧಿ ಹಾಗೂ ಹಿಂದಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ್ದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಈ ಕಚೇರಿ ಕಟ್ಟಡ ತೆರವಿನಿಂದ ತೀವ್ರ ನೋವಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಕಚೇರಿಯನ್ನು ಒಡೆಯುವ ಮುನ್ನ ಹಿಂದಿನ ಸಾಲಿನ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿರುವ ಹಿರಿಯರು ಹಾಗೂ ಅನುಭವಿ ಭಕ್ತ ಸದಸ್ಯರುಗಳ ಸಲಹೆ ಪಡೆಯಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.ಅಲ್ಲದೆ, ಪ್ರಾಚ್ಯವಸ್ತು ಇಲಾಖೆ ಯಂತಹ ಸಂಸ್ಥೆಗಳಿಗೆ ದೂರು ನೀಡಿದರೆ ಸಾಕಷ್ಟು ಪರಿಣಾಮಗಳನ್ನು ವ್ಯವಸ್ಥಾಪನಾ ಸಮಿತಿ ಹಾಗೂ ಸಂಬಂಧಿಸಿದ ಅಧಿಕಾರಿ ವರ್ಗ ಎದುರಿಸಬೇಕಾದೀತು ಎಂದು ಸೂಚ್ಯವಾಗಿ ನೆನಪಿಸಿದ್ದಾರೆ.

ಕೊಡಗು ಜಿಲ್ಲಾ ಜಾನಪದ ಪರಿಷತ್ತಿನಿಂದ ಹಿಂದಿನ ಜಿಲ್ಲಾಧಿಕಾರಿ ಹಾಗೂ ಈಗಿನ ಜಿಲ್ಲಾಧಿಕಾರಿಗಳಿಗೆ ಈ ಕಟ್ಟಡವನ್ನು ಕೊಡಗು ಜಾನಪದ ಪರಿಷತ್ತಿನ ಕಚೇರಿ ಹಾಗೂ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಲು ಅವಕಾಶ ಕಲ್ಪಿಸಲು ಮನವಿ ಸಲ್ಲಿಸಿದ್ದಾಗಿ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪರಿಶೀಲಿಸುವ ದಾಗಿಯೂ

(ಮೊದಲ ಪುಟದಿಂದ) ಈಗಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಪರಿಷತ್ತಿನ ನಿಯೋಗಕ್ಕೆ ಭರವಸೆ ನೀಡಿದ್ದರು. ಆದರೆ ಈ ನಡುವೆ ಚರಿತ್ತಾರ್ಹ ಕಟ್ಟಡವನ್ನು ಸಾರ್ವಜನಿಕರಿಗೆ ಯಾವದೇ ಮುನ್ಸೂಚನೆ ನೀಡದೆ ತೆರವುಗೊಳಿಸಿರುವದು ದುರದೃಷ್ಟವೆಂದು ಬಣ್ಣಿಸಿದರು.

ದೇವಾಲಯದ ಪ್ರಧಾನ ಅರ್ಚಕ ಬಿ.ಜಿ. ನಾರಾಯಣ ಭಟ್ ಈ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆಂಜನೇಯ ಗುಡಿ ಹಾಗೂ ಸುದೀರ್ಘ ಅವಧಿಗೆ ತಾವು ವಸತಿ ಹೊಂದಿದ್ದ ಮನೆಗಳನ್ನು ಹಾಗೂ ದೇವಾಲಯದ ಸೌದೆ ಕೊಠಡಿಯನ್ನು ಇದೇ ರೀತಿ ತರಾತುರಿಯಲ್ಲಿ ತೆರವುಗೊಳಿಸಿದ್ದಾಗಿ ಬೊಟ್ಟು ಮಾಡಿದ್ದಾರೆ.

ಈಗ ತೆರವುಗೊಳಿಸಿರುವ ಕಟ್ಟಡ ಸಮಗ್ರ ಕೊಡಗಿನ ಮುಜರಾಯಿ ದೇವಾಲಯಗಳ ನಿಧಿ ಕಚೇರಿಯಾಗಿದ್ದು, ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸುದೀರ್ಘ ಆಡಳಿತ ನಡೆಸಿರುವ ಇತಿಹಾಸವಿದೆ ಎಂದು ನೆನಪಿಸಿದ್ದಾರೆ. ಹಿಂದೆ ಫೀ.ಮಾ. ಕಾರ್ಯಪ್ಪ ಅವರು ಈ ಕಟ್ಟಡದಲ್ಲಿ ಡಿವೈನ್ ಸೊಸೈಟಿ ಸ್ಥಾಪಿಸಿ ಅನೇಕ ಚಟುವಟಿಕೆ ನಡೆಸಿದ್ದರೆ, ಕೊಡಗಿನಲ್ಲಿ ಕರ್ನಾಟಕ ಸಂಘದ ಚಟುವಟಿಕೆ ಕೂಡ ಇಲ್ಲಿಂದ ಆರಂಭಗೊಂಡಿದ್ದಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ ಅನೇಕ ಭಕ್ತರು ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷರ ಪ್ರತಿಕ್ರಿಯೆ : ಕಳೆದ ಅಕ್ಟೋಬರ್‍ನಲ್ಲಿ ಪತ್ರಿಕಾ ಪ್ರಕಟಣೆಯೊಂದಿಗೆ ಶಿಥಿಲಗೊಂಡಿದ್ದ ಕಟ್ಟಡದ ಮಾಡು ಹಾಗೂ ಗೋಡೆ ತೆರವಿಗೆ ಕ್ರಮ ಕೈಗೊಂಡಿದ್ದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಆ ವೇಳೆ ಯಾರೊಬ್ಬರು ಬಿಡ್ ಸಲ್ಲಿಸದ ಕಾರಣ ಸಮಿತಿಯಿಂದ ತೆರವುಗೊಳಿಸಿ ಅಲ್ಲಿ ಮಹಾದ್ವಾರ ಕಲ್ಲಿಸಲಾಗುತ್ತದೆ. ಮೇಲ್ಭಾಗದ ಛಾವಣಿ ಶಿಥಿಲಗೊಂಡಿದ್ದು, ಅಷ್ಟು ಭಾಗವನ್ನು ಮಾತ್ರ ಕೆಡವಲಾಗಿದೆ. ಕೆಳಭಾಗದಲ್ಲಿ ಹಳೆಯ ಕೆತ್ತನೆಗಳನ್ನು ಮೆಟ್ಟಿಲುವರೆಗಿನ ಭಾಗವನ್ನು ಹಾಗೆಯೇ ಉಳಿಸಲಾಗಿದೆ. ಮುಂದೆ ಭಕ್ತಾದಿಗಳಿಗೆ ಇದೇ ಸ್ಥಳದಲ್ಲಿ ಲಾಡು ಪ್ರಸಾದವನ್ನು ಒದಗಿಸಲು ಈ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿಯಿತ್ತರು.